ಕಥೊಲಿಕ್ ಸಭಾ ಅಧ್ಯಕ್ಷರ ಹಲ್ಲೆ ಪ್ರಕರಣ – ದುಷ್ಕರ್ಮಿಗಳನ್ನು 24 ತಾಸುಗಳ ಮೊದಲು ಬಂಧಿಸದಿದ್ದಲ್ಲಿ ಠಾಣೆ ಎದುರು ಧರಣಿ : ಕೇಂದ್ರೀಯ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ಖಡಕ್ ಎಚ್ಚರಿಕೆ

ಮಂಗಳೂರು : ದುಷ್ಕರ್ಮಿಗಳನ್ನು 24 ತಾಸುಗಳ ಮೊದಲು ಬಂಧಿಸದಿದ್ದಲ್ಲಿ ಠಾಣೆ ಎದುರು ಧರಣಿ ನಡೆಸಲಾಗುವುದು ಎಂದು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ಪೊಲೀಸ್ ಇಲಾಖೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಜೆರೊಮ್ ಡಿಸೋಜ ಪಾನೀರ್ ಇವರ ಮೇಲೆ ದಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆ ನಡೆಸಿದ ಕುರಿತು ತುರ್ತು ಪತ್ರಿಕಾಗೋಷ್ಠಿಯಲ್ಲಿ ಘಟನೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಅಕ್ಟೋಬರ್ 05ರಂದು ಶನಿವಾರ ಅಪರಾಹ್ನ 03:00 ಗಂಟೆಗೆ ಅಡ್ಯಾರ್ ಸೇತುವೆಯ ಬಳಿ ಪತ್ರಕರ್ತೆಯೊಬ್ಬರೊಂದಿಗೆ ಪಾವೂರು ಉಳಿಯ ಪ್ರದೇಶದಲ್ಲಿ ಸ್ಥಳ ವೀಕ್ಷಣೆ ನಡೆಸುವ ಸಲುವಾಗಿ ಕಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರು ತೆರಳಿದ್ದರು. ತನ್ನ ವಾಹನದ ಬಳಿ ನಿಂತಿರುವಾಗ ಸುಮಾರು 20 ಮಂದಿಯ ತಂಡವು ಅವರನ್ನು ಹತ್ಯೆಗೈಯುವ ಉದ್ದೇಶದಿಂದ, ಎಕಾಏಕಿ ಅವಾಚ್ಯ ಪದಗಳನ್ನು ಉಪಯೋಗಿಸಿ, ‘ಮರಳು ತೆಗೆಯುವ ಬಗ್ಗೆ, ಪ್ರತಿಭಟನೆ ನಡೆಸುತ್ತಾ ಇದ್ದಿ. ನಿನ್ನಿಂದಾಗಿ ನಮ್ಮ ದೋಣಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿರುತ್ತಾರೆ. ನಿನ್ನನ್ನು ಜೀವಂತವಾಗಿ ಬದುಕಲು ಬಿಡುವುದಿಲ್ಲ. ನೀನು ಬೈಕಿನಲ್ಲಿ ಒಬ್ಬನೇ ಹೋಗುತ್ತಿರುವಾಗ ನಿನ್ನನ್ನು ಟಿಪ್ಪರ್‌ನ ಅಡಿಗೆ ಹಾಕಿ ಸಾಯಿಸುತ್ತೇವೆ. ನಿನ್ನ ಮನೆಗೆ ಹೊಕ್ಕಿ ನಿನ್ನನ್ನು ಕೊಲೆ ಮಾಡುತ್ತೇವೆ. ಇವತ್ತೇ ನಿನ್ನನ್ನು ಸಾಯಿಸುತ್ತೇವೆ.’ ಎಂದು ಹೇಳಿ ಹೊಂಡಕ್ಕೆ ದೂಡಿ ಹಾಕಿರುತ್ತಾರೆ. ಹೊಂಡದ ಪಕ್ಕದಲ್ಲಿರುವ ಬಂಡೆ ಕಲ್ಲಿನ ಮೇಲೆ ಬಿದ್ದು ಅವರ ಭುಜದ ಮೂಳೆ ತಪ್ಪಿರುತ್ತದೆ. ಅಡ್ಡಹಾಕಿ ಸೊಂಟಕ್ಕೆ ತುಳಿದಿರುದರಿಂದ ಪಕ್ಕೆಲುಬುಗಳಿಗೆ ಪೆಟ್ಟಾಗಿರುತ್ತದೆ. ಹಲ್ಲೆ ನಡೆಸಿದ ಸಂದರ್ಭದಲ್ಲಿ ತಲೆಗೆ ಹಾಗೂ ಮೂಗಿಗೆ ಪೆಟ್ಟಾಗಿದೆ. ಬಲ ಕೈಯ ಕಿರು ಬೆರಳು ಮುರಿದಿರುತ್ತದೆ. ಆ ಸಂದರ್ಭದಲ್ಲಿ ಪತ್ರಕರ್ತೆಯು ಶಬ್ದ ಕೇಳಿ ತನ್ನೊಂದಿಗಿರುವ ಛಾಯಾಗ್ರಾಹಕರೊಂದಿಗೆ ಹತ್ತಿರ ಬಂದದ್ದನ್ನು ನೋಡಿ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿರುತ್ತಾರೆ.
ಅಲ್ಲಿಂದ 50 ಮೀಟರ್ ದೂರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೋಲಿಸ್ ಠಾಣೆ ವಾಮಂಜೂರು ಇದರ ಅಧಿಕಾರಿಗಳು ಉಪಸ್ಥಿತರಿದ್ದುದ್ದನ್ನು ಕಂಡು ಅವರ ಬಳಿ ಈ ವಿಷಯ ತಿಳಿಸಿದಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ. ಈ ಸಂದರ್ಭದಲ್ಲಿ ಅಸ್ವಸ್ಥರಾದ ಆಲ್ವಿನ್ ಡಿಸೋಜರನ್ನು ಮಾಧ್ಯಮದವರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಈ ಕುರಿತು ಪತ್ರಕರ್ತೆಯು ಅಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ವೀಡಿಯೋ ಚಿತ್ರೀಕರಣವನ್ನು ಮಾಡಿರುತ್ತಾರೆ. ತದ ನಂತರ ಸರಿ ಸುಮಾರು 06:00 ಗಂಟೆಗೆ ಸಹಾಯಕ ಪೊಲೀಸ್ ಆಯುಕ್ತರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಕುರಿತು ತಿಳಿದುಕೊಂಡಿರುತ್ತಾರೆ. ರಾತ್ರಿ 8:00 ಗಂಟೆಗೆ ಗ್ರಾಮಾಂತರ ಪೋಲಿಸ್ ಠಾಣೆ ವಾಮಂಜೂರು ಇಲ್ಲಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆಲ್ವಿನ್ ಡಿಸೋಜರ ಹೇಳಿಕೆಯನ್ನು ಪಡೆದುಕೊಂಡಿರುತ್ತಾರೆ. ಉಳಿಯ ಪಾವೂರು, ರಾಣಿಪುರ, ಉಳ್ಳಾಲ ಹೊಯ್ಗೆ, 62 ನೇ ತೋಕೂರು ಕೆಂಜಾರು ಈ ಪ್ರದೇಶಗಳ ದ್ವೀಪಗಳನ್ನು ಉಳಿಸುವ ಉದ್ದೇಶದಿಂದ ದಿನಾಂಕ 27.09.2024ರಂದು ನಡೆಸಿದ ಬೃಹತ್ ಪ್ರತಿಭಟನೆಯ ಪ್ರತಿಫಲವಾಗಿ ಶಾಂತಿ ಪ್ರಿಯರಾದ ನಮಗೆ ಸಿಕ್ಕ ಕಾಣಿಕೆಯಂತಾಗಿದೆ. ಈ ಪ್ರಕೃತಿಯನ್ನು ನಾಶಗೊಳಿಸುವವರ ವಿರುದ್ದ ನಮ್ಮ ಮೇಲೆ ಇನ್ನೆಷ್ಟು ಹಲ್ಲೆ ನಡೆಸಿದರೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ.
ಆಲ್ವಿನ್ ಡಿಸೋಜರವರ ಮೇಲೆ ನಡೆಸಿರುವಂತಹ ಮಾರಣಾಂತಿಕ ಹಲ್ಲೆಯು ನಮ್ಮೆಲ್ಲರಿಗೂ ಅತೀವ ನೋವು ತಂದಿದೆ ಹಾಗೂ ನಮ್ಮನ್ನು ಭಯಭೀತರನ್ನಾಗಿಸಿದೆ. ಮುಂದಿನ 24 ಗಂಟೆಗಳ ಒಳಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯ ಸಿಗುವವರೆಗೆ ವಾಮಂಜೂರು ಗ್ರಾಮಾಂತರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆಯನ್ನು ಕೈಗೊಳ್ಳಲಿದ್ದೇವೆ ಎಂದರು.
ಈ ಸಂದರ್ಭ ಪತ್ರಿಕಾ ಗೋಷ್ಠಿಯಲ್ಲಿ ಅತೀ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ – ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.), ಪಾವ್ಲ್ ರೊಲ್ಫಿ ಡಿಕೋಸ್ತಾ – ಮಾಜಿ ಅಧ್ಯಕ್ಷರು, ಸ್ಟ್ಯಾನಿ ಲೋಬೊ – ನಿಕಟ ಪೂರ್ವ ಅಧ್ಯಕ್ಷರು, ಆಲ್ವಿನ್ ಪ್ರಶಾಂತ್ ಮೊಂತೇರೊ – ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಹಾಗೂ ಗಿಲ್ಬರ್ಟ್ ಡಿಸೋಜ – ಪಾವೂರು ಉಳಿಯ ದ್ವೀಪ ನಿವಾಸಿ ಉಪಸ್ಥಿತರಿದ್ದರು.