ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ “ಸುವರ್ಣ ಸಮ್ಮಿಲನ” ಕಾರ್ಯಕ್ರಮ – ಸಮಾಜ ಸೇವಾ ಮನೋಭಾವದಿಂದ ಶೈಕ್ಷಣಿಕ ಕಲಿಕೆ ಅರ್ಥಪೂರ್ಣ : ಡಿ. ಹರ್ಷೇಂದ್ರ
ಉಜಿರೆ : ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಸೇವಾ ಮನೋಭಾವವು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯನ್ನು ಅರ್ಥಪೂರ್ಣವಾಗಿಸುತ್ತೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಶನಿವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾದ ‘ಸುವರ್ಣ ಸಮ್ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ-ಕಾಲೇಜು ಕಲಿಕೆಯಿಂದ ಹಲವರು ವಿದ್ಯಾವಂತರಾಗುತ್ತಾರೆ. ವಿದ್ಯಾವಂತರು ಬೆಳವಣಿಗೆಯ ಹಾದಿ ಕ್ರಮಿಸುತ್ತಾ ವಿಚಾರವಂತರಾಗಿ ರೂಪುಗೊಳ್ಳುತ್ತಾರೆ. ವಿದ್ಯೆ ಮತ್ತು ವೈಚಾರಿಕತೆಯನ್ನು ರೂಢಿಸಿಕೊಂಡಾಗ ವ್ಯಕ್ತಿಗಳಲ್ಲಿ ಪ್ರಭುದ್ಧತೆ ರೂಪುಗೊಳ್ಳುತ್ತದೆ. ವಿದ್ಯೆ ವಿಚಾರಗಳನ್ನು ಆಚರಣೆಗೆ ತಂದಾಗ ಆ ಪ್ರಭುದ್ಧತೆಗೆ ಅರ್ಥಪೂರ್ಣ ಜೀವಂತಿಕೆ ದಕ್ಕುತ್ತದೆ. ಇಂತಹ ಜೀವಂತಿಕೆಯ ಶಕ್ತಿಯನ್ನು ರಾಷ್ಟೀಯ ಸೇವಾ ಯೋಜನೆ ಮೂಡಿಸುತ್ತದೆ ಎಂದು ಅವರು ಹೇಳಿದರು.
ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ನಾಗರಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯೊಂದಿಗೆ ಗುರುತಿಸಿಕೊಂಡ ವಿದ್ಯಾರ್ಥಿಗಳು ನೇರವಾಗಿ ಸಮುದಾಯಗಳೊಂದಿಗೆ ಬೆರೆತು ನಾಗರಿಕ ಪ್ರಜ್ಞೆಯನ್ನು ನೆಲೆಗೊಳಿಸುತ್ತಾರೆ. ಎನ್.ಎಸ್.ಎಸ್. ಸ್ವಯಂ ಸೇವಕರು ಸ್ವತಃ ನಾಗರಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸಮಾಜದ ವಿವಿಧ ವಲಯಗಳಲ್ಲಿ ಸಮಾಜಪರ ಮನೋಭಾವವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ವಿಶೇಷ ಕೊಡುಗೆ ನೀಡುತ್ತಾರೆ ಎಂದರು. ಹಳ್ಳಿಗಳಲ್ಲಿ ಸೇವಾ ಕೈಂಕರ್ಯದೊಂದಿಗೆ ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿದ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕವು ೩೬ ಪ್ರಶಸ್ತಿಗಳನ್ನು ಪಡೆದಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಯೋಜನಾಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಎನ್. ಎಸ್.ಎಸ್.ನ ಸಮಾಜಪರ ಆಲೋಚನಾ ಕ್ರಮಗಳ ವಿಶೇಷತೆಯನ್ನು ಪರಿಚಯಿಸಿದರು. ಎನ್.ಎಸ್.ಎಸ್. ಸ್ವಯಂಸೇವಕರಾದವರು ಸಮಾಜಕ್ಕೆ ಕೊಡುಗೆಗಳನ್ನು ಕೊಡುವುದರ ಕಡೆಗೆ ಹೆಚ್ಚು ಚಿಂತಿಸುತ್ತಾರೆ. ಎನ್.ಎಸ್.ಎಸ್.ನ ಕಾರ್ಯಚಟುವಟಿಕೆಗಳು ಸ್ವಯಂಸೇವಾ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ವ್ಯಕ್ತಿಗತವಾಗಿ ರಚನಾತ್ಮಕ ದೃಷ್ಟಿಕೋನ ಹೊಂದುವಲ್ಲಿ ಸಹಾಯಕವಾಗುತ್ತವೆ ಎಂದು ನುಡಿದರು.
ರಾಷ್ಟ್ರದಾದ್ಯಂತ 45 ಲಕ್ಷಕ್ಕೂ ಹೆಚ್ಚು ಎನ್.ಎಸ್.ಎಸ್. ಸ್ವಯಂ ಸೇವಕರಿದ್ದಾರೆ. ಕರ್ಣಾಟಕವು ಆರೂವರೆ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿ ವಿಶೇಷ ಮನ್ನಣೆಯನ್ನು ಪಡೆದಿದೆ. ಎಸ್.ಡಿ.ಎಂ. ಕಾಲೇಜಿನ ಎನ್. ಎಸ್.ಎಸ್. ಘಟಕವು ವಿನೂತನವಾಗಿ ಗುರುತಿಸಿಕೊಂಡಿದೆ ಎಂದರು. ಮಂಗಳೂರು ವಿಶ್ವ ವಿದ್ಯಾಲಯದ ರಾಷ್ಟೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಶೇಷಪ್ಪ ಕೆ. ಅಮೀನ್ ಮಾತನಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಸುಧಾರಿತ ಸಮಾಜದ ಪರಿಕಲ್ಪನೆಯನ್ನು ವ್ಯಕ್ತಿಗತ ಗುಣಾತ್ಮಕ ಬದಲಾವಣೆಯ ಮೂಲಕ ಅನುಷ್ಠಾನಕ್ಕೆ ತರುವ ಶ್ರೇಷ್ಠ ಕಾರ್ಯಗಳ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯು ಹೆಗ್ಗುರುತು ಮೂಡಿಸಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಾರ್ಪಣೆ: ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ‘ಬದುಕು ಕಟ್ಟೋಣ ಬನ್ನಿ’ ಸಂಸ್ಥೆಯ ಲಕ್ಷ್ಮಿ ಮೋಹನ್, ರವಿ ಕಟಪಾಡಿ ಅವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಂದಿನ ಅವಧಿಗಳಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾಗಿದ್ದ ಡಾ. ಬಿ.ಎ. ಕುಮಾರ ಹೆಗ್ಡೆ, ಡಾ. ಸಂಪತ್ ಕುಮಾರ್ ಎಸ್., ಡಾ. ಸತೀಶ್ಚಂದ್ರ ಎಸ್., ಡಾ. ಜಯಕುಮಾರ ಶೆಟ್ಟಿ, ಪ್ರೊ. ಡಿ. ಕೃಷ್ಣಮೂರ್ತಿ, ಪ್ರೊ. ಎಸ್.ಎನ್. ಕಾಕತ್ಕರ್, ಡಾ. ವಿಶ್ವನಾಥ್ ಪಿ., ಡಾ. ಎಂ.ಪಿ. ಶ್ರೀನಾಥ್, ರೂಪಾರಾಣಿ, ಡಾ. ಬಾನುಪ್ರಕಾಶ್ ಬಿ., ಗಣೇಶ್ ವಿ. ಶಿಂಧೆ, ಪ್ರೊ. ಆಲ್ಫೋನ್ಸಮ್ಮ, ಆಶಾಕಿರಣ, ಶಕುಂತಲಾ, ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ‘ಸೇವಾಪಥ’ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಾಪಕರಾದ ದೀಕ್ಷಿತ್ ರೈ ಹಾಗೂ ವಿದ್ಯಾರ್ಥಿನಿ ಸಿಂಚನ ಕಲ್ಲೂರಾಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿದರು. ಪ್ರೊ. ದೀಪಾ ಆರ್.ಪಿ. ವಂದಿಸಿದರು.