ಸಾಹಿತಿಗಳು ಸಮಾಜ ಸುಧಾರಣೆಯ ಸೂತ್ರದಾರರು – MLC ಐವನ್ ಡಿಸೋಜಾ

“ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಸಾಹಿತ್ಯಕ್ಕಿದೆ. ರಾಜಕಾರಣಿಗಳಿಗೆ ಇರುವ ಹಾಗೆ ಸಾಹಿತಿಗಳಿಗೆ ಮಿತಿ – ಮುಲಾಜುಗಳಿಲ್ಲ. ಅವರು ನೇರವಾಗಿ ಮಾತನಾಡುತ್ತಾರೆ, ಬರೆಯುತ್ತಾರೆ. ಆದುದರಿಂದ ಸಾಹಿತಿಗಳನ್ನು ಸಮಾಜ ಸುಧಾರಣೆಯ ಸೂತ್ರದಾರರು ಎನ್ನಬಹುದು. ಸಾಹಿತ್ಯ ಮತ್ತು ಸಮಾಜ ಬೆಳೆಯಲು ವಿಮರ್ಶೆ ಬಹಳ ಮುಖ್ಯವಾದುದು. ನಾವೆಲ್ಲರೂ ವಿಮರ್ಶೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು.” ಎಂದು MLC ಐವನ್ ಡಿಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಎಂ.ಸಿ.ಸಿ. ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ, ಫ್ಲೊಯ್ಡ್ ಕಿರಣ್ ಮೊರಾಸ್ ಇವರಿಗೆ ಲಿಯೊ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರ ಪ್ರಧಾನ ಮಾಡಿ ಹೇಳಿದರು.
ಪ್ರಶಸ್ತಿ ಪೋಶಕರಾದ ಲಿಯೊ ರೊಡ್ರಿಗಸ್ ಅಬುದಾಬಿಯಿಂದ ವಿಡಿಯೊ ಸಂದೇಶದ ಮೂಲಕ ಪ್ರಶಸ್ತಿ ವಿಜೇತರಿಗೆ ಶುಭಹಾರೈಸಿದರು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಕಿರಣ್ ಮೊರಾಸ್ ಇವರಿಗೆ ಶುಭ ಹಾರೈಸಿ “ಲಿಯೊ ರೊಡ್ರಿಗಸ್ ಅವರು ಕಳೆದ ಹತ್ತು ವರ್ಷಗಳಿಂದ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡುತ್ತಿರುವ ಕಿಟಾಳ್ ಯುವ ಪುರಸ್ಕಾರ ಕೊಂಕಣಿ ಸಾಹಿತ್ಯ ಮತ್ತು ಭಾಷೆಯನ್ನು ಬೆಳೆಸಿದೆ. ಈ ಹಿಂದೆ ಯುವ ಪುರಸ್ಕಾರ ಪಡೆದವರು ಇಂದು ಅಗ್ರ ಶ್ರೇಣಿಯ ಸಾಹಿತಿಗಳಾಗಿ ಕೊಂಕಣಿಯಲ್ಲಿ ಮಿಂಚುತ್ತಿದ್ದಾರೆ. ಸಾಹಿತ್ಯ, ಸಂಗೀತ, ಕಲೆ – ಯಾವುದೇ ಕ್ಷೇತ್ರ ಬೆಳೆಯಬೇಕಾದರೆ ಯುವ ಪ್ರತಿಭೆಗಳನ್ನು ಗುರುತಿಸಿ, ಹುರಿದುಂಬಿಸುವುದು ಬಹಳ ಮುಖ್ಯ” ಎಂದರು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಕಿರಣ್ ನಿರ್ಕಾಣ್ “ಪ್ರಶಸ್ತಿ ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದ್ದು, ಕೊಂಕಣಿ ಭಾಷೆಯ ಕಂಪು ವಿದೇಶಗಳಿಗೂ ಪಸರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು. ಕಿರಣ್ ನಿರ್ಕಾಣ್ ಕುಟುಂಬಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಿಟಾಳ್ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕ ಎಚ್. ಎಮ್. ಪೆರ್ನಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಸಂಪಾದಕ ಕವಿ ವಿಲ್ಸನ್ ಕಟೀಲ್ ಪ್ರಶಸ್ತಿ ವಿಜೇತರ ಪರಿಚಯ ಮಾಡಿ ಸನ್ಮಾನ ಪತ್ರ ವಾಚಿಸಿದರು. ಆಯ್ಕೆ ಸಮಿತಿಯ ಅಧ್ಯಕ್ಷ ಕವಿ, ಚಿಂತಕ ಟೈಟಸ್ ನೊರೊನ್ಹಾ ಸಮಾರೋಪದ ಮಾತುಗಳನ್ನಾಡಿ ವಂದನಾರ್ಪಣೆ ಮಾಡಿದರು. ಯುವಕವಿ ವಿಲ್ಸನ್ ಕಿನ್ನಿಗೋಳಿ ನಿರೂಪಿಸಿದರು.
ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರದ ಪ್ರವರ್ತಕರಾದ ಮೈಕಲ್ ಡಿಸೋಜಾ, ಯುವ ಉದ್ಯಮಿ ರೋಹನ್ ಮೊಂತೇರೊ, ಉದ್ಯಮಿ ರಮೇಶ್ ನಾಯ್ಕ್, ಮುಖಂಡರಾದ ಪಿಯೂಸ್ ಎಲ್. ರೊಡ್ರಿಗಸ್, ನವೀನ್ ಆರ್. ಡಿಸೋಜಾ, ಮಾರ್ಸೆಲ್ ಮೊಂತೇರೊ ಮತ್ತಿತರರು ಹಾಜರಿದ್ದರು.