ಕಥೊಲಿಕ್ ಸಭಾ ಅಧ್ಯಕ್ಷರ ಮೇಲಿನ ಹಲ್ಲೆ ಪ್ರಕರಣ, ಬಾಕಿ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮಹಿಳಾ ಆಯೋಗ ಒತ್ತಾಯ
ಮಂಗಳೂರು : ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಜೆರೊಮ್ ಡಿಸೋಜ ಪಾನೀರ್ ಇವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ವಾಮಂಜೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು ಬಾಕಿ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗದ ಕಾರ್ಯದರ್ಶಿ ಅನಿತಾ ಫ್ರಾಂಕ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರನ್ನು ಗುರುವಾರ ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಆಲ್ವಿನ್ ಡಿಸೋಜ ಅವರು ಅಕ್ಟೋಬರ್ 5ರಂದು ಪಾವೂರು ಉಳಿಯ ದ್ವೀಪ ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ವೀಕ್ಷಣೆಗೆ ಪತ್ರಕರ್ತರೊಂದಿಗೆ ತೆರಳಿದ್ದಾಗ ಸುಮಾರು 20 ಜನರ ಗುಂಪು ಇವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಈ ಘಟನೆಗೆ ಸಂಬಂಧಿಸಿ ಕಥೊಲಿಕ್ ಸಭಾ ಸಂಘಟನೆಯ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ ಇವರ ಮುಂದಾಳತ್ವದಲ್ಲಿ ಡಿಸಿಪಿ ಮತ್ತು ಎಸಿಪಿ ಮುಖಾಂತರ ಆರೋಪಿಗಳನ್ನು ಬಂಧಿಸುವಂತೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವರ್ತರಾದ ಮಂಗಳೂರು ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರ ಭೇಟಿ ಸಂದರ್ಭ ಉಷಾ ಫೆರ್ನಾಂಡಿಸ್, ಮರ್ಸಿ ಮಿನೇಜಸ್, ಐವಿ ಪಿಂಟೊ ಹಾಗೂ ಲಿನೆಟ್ ಕ್ಯಾಸ್ತೆಲಿನೊ ಉಪಸ್ಥಿತರಿದ್ದರು