ನೇರಳಕಟ್ಟೆ ಸಮೀಪದ ಭಗವಂತ ಕೋಡಿಯಲ್ಲಿ ಒಂದೇ ದಿನ ಇಬ್ಬರು ಮರಣ
ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಭಗವಂತಕೋಡಿ ಎದುರು – ಬದುರು ಮನೆಯ ನಿವಾಸಿಗಳಿಬ್ಬರು ಅಕ್ಟೋಬರ್ 10ರಂದು ಗುರುವಾರ ಬೆಳಗ್ಗೆ ಒಂದೇ ದಿನ ನಿಧನರಾದರು.
ಅಬ್ದುರ್ರಹ್ಮಾನ್ ಮೇಸ್ತ್ರಿ (54) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರೆ ಅವರ ಮೃತದೇಹವನ್ನು ನೋಡಿ ಸ್ವಗೃಕ್ಕೆ ಬಂದ ಎದುರು ಮನೆಯ ಹನೀಫ್ ಸಾಹೇಬ್ (65) ಹೃದಯಾಘಾತದಿಂದ ನಿಧನ ಹೊಂದಿದರು.
ಅಬ್ದುರ್ರಹ್ಮಾನ್ ಮೇಸ್ತ್ರಿ ಅವರು ಮೂಲತಃ ವಿಟ್ಲ ಸಮೀಪದ ಒಕ್ಕೆತ್ತೂರು – ಕೊಡಂಗೆ ನಿವಾಸಿಯಾಗಿದ್ದು ಇತ್ತೀಚೆಗೆ ಭಗವಂತಕೋಡಿಯಲ್ಲಿ ಮನೆ ಖರೀದಿಸಿ ವಾಸವಾಗಿದ್ದರು. ಅವರ ಮೃತ ಶರೀರ ಇದೀಗ ಭಗವಂತಕೋಡಿಯಲ್ಲಿದ್ದು ಸಂಜೆಯ ಬಳಿಕ ಒಕ್ಕೆತ್ತೂರು – ಕೊಡಂಗೆ ಮಸೀದಿ ಬಳಿ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಹನೀಫ್ ಸಾಹೇಬ್ ಅವರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.