ಯದುವೀರ್ ತ್ರಿಶಿಕಾ ಒಡೆಯರ್ ದಂಪತಿಗೆ ಗಂಡು ಮಗು ಜನನ – ಮೈಸೂರು ಅರಮನೆಗೆ ನಾಡಹಬ್ಬದ ಬಂಪರ್
ಮೈಸೂರು: ನಾಡಹಬ್ಬ ಮೈಸೂರು ದಸರಾದ ಸಂಭ್ರಮದ ನಡುವೆಯೇ ಮೈಸೂರು ರಾಜಮನೆತನಕ್ಕೆ ಇನ್ನೊಂದು ಸಿಹಿ ಸುದ್ದಿ ಬಂದಿದೆ. ನವರಾತ್ರಿಯ ಸಂಭ್ರಮದ ನಡುವೆಯೇ, ಯುವರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಅವರು ಇನ್ನೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೈಸೂರು ಅರಮನೆಗೂ ಮೈಸೂರಿನ ಜನತೆಗೂ ದಸರಾ ಹಬ್ಬದ ಸಂಭ್ರಮ ಇದರಿಂದ ದುಪ್ಪಟ್ಟಾಗಿದೆ.
ನವರಾತ್ರಿ ಆರಂಭದ ಪೂಜಾ ಸಂದರ್ಭದಲ್ಲಿಯೇ ತ್ರಿಶಿಕಾ ಕುಮಾರಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಗಮನಿಸಿದ ಹಲವರು ಈ ಅನುಮಾನ ವ್ಯಕ್ತಪಡಿಸಿದ್ದರು. ಅರಮನೆಗೆ ಇನ್ನೊಂದು ಕುಡಿಯ ಆಗಮನಕ್ಕೆ ಕ್ಷಣಗಣನೆಯಾಗುತ್ತಿದೆ ಎಂದಿದ್ದರು. ಹಬ್ಬದ ನಡುವೆಯೇ, ಅದೂ ಆಯುಧ ಪೂಜೆಯ ದಿನವೇ ಪುತ್ರೋತ್ಸವ ಆಗಿರುವುದು ಇದೀಗ ಅರಮನೆಯ ಸಂತಸವನ್ನು ನೂರ್ಮಡಿಗೊಳಿಸಿದೆ.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ರಾಜಸ್ಥಾನದ ದುಂಗರ್‌ಪುರ್ ಯುವರಾಣಿ ತ್ರಿಷಿಕಾ ಅವರೊಂದಿಗೆ 2016 ಜೂನ್ 27ರಂದು ನಡೆದಿತ್ತು. ಯುವರಾಣಿ ತ್ರಿಷಿಕಾ ಕುಮಾರಿ ಸಿಂಗ್ ಅವರು ಬೆಂಗಳೂರಿನಲ್ಲಿಯೇ ಅಧ್ಯಯನ ಮಾಡುತ್ತಿದ್ದು, ಆಗ ಯದುವೀರ್ ಅವರೊಂದಿಗೆ ಗೆಳೆತನ ಹೊಂದಿದ್ದರು. 2016ರಲ್ಲಿ ನೂತನ ಯುವರಾಣಿಯನ್ನಾಗಿ ಮೈಸೂರು ತ್ರಿಶಿಕಾ ಅವರನ್ನು ಒಪ್ಪಿಕೊಂಡಿತ್ತು.
2017ರಲ್ಲಿ ಯದುವೀರ್- ತ್ರಿಶಿಕಾ ಜೋಡಿಗೆ ಚೊಚ್ಚಲ ಮಗುವಿನ ಆಗಮನವಾಗಿತ್ತು. ಗಂಡು ಮಗುವಿಗೆ ಆದ್ಯವೀರ್ ಎಂದು ಹೆಸರು ಇಟ್ಟಿದ್ದಾರೆ. ಆದ್ಯವೀರ್ ಹುಟ್ಟಿದ ಬಳಿಕ ಅರಮನೆ ನೂತನ ಯುವರಾಜನ ನಂದನವನವಾಗಿ ಪರಿವರ್ತನೆಯಾಗಿತ್ತು. ಸಾಮಾನ್ಯವಾಗಿ ಯದುವೀರ್ ತ್ರಿಶಿಕಾ ತಮ್ಮ ಖಾಸಗಿ ವಿಚಾರಗಳನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳಲು ಬಯಸುತ್ತಾರೆ. ಹೀಗಾಗಿ ಎರಡನೇ ಸಲ ಗರ್ಭಿಣಿಯಾಗಿರುವ ವಿಚಾರವನ್ನು ಅವರು ಗುಪ್ತವಾಗಿಯೇ ಇಟ್ಟುಕೊಂಡಿದ್ದರು. ವಿಶೇಷ ಎಂದರೆ, 2017ರ ದಸರಾ ಮಹೋತ್ಸವಗಳ ಕಾರ್ಯಕ್ರಮದಲ್ಲಿ ತ್ರಿಶಿಕಾ ಭಾಗವಹಿಸುವಾಗಲೂ ಗರ್ಭಿಣಿಯಾಗಿದ್ದರು. 56 ವರ್ಷಗಳ ಬಳಿಕ ಗರ್ಭಿಣಿ ಮಹಾರಾಣಿ ದಸರಾ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅರಮನೆಯವರು ಹರ್ಷ ವ್ಯಕ್ತಪಡಿಸಿದ್ದರು. ಇದೀಗ ಎರಡನೇ ಮಗುವೂ ದಸರಾ ಸಂದರ್ಭದಲ್ಲಿಯೇ ಆಗಿದೆ. ರಾಜಮನೆತನಕ್ಕೆ ಎರಡೆರಡು ಹಬ್ಬಗಳು ಒಂದೇ ಸಲ ಆಗಮಿಸಿವೆ.