ಹಿಂದೂ ಸಮಾಜ ಗಟ್ಟಿ ಆಗಬೇಕಾದರೆ ಧರ್ಮ ಅನುಷ್ಠಾನ ಸರಿಯಾದ ಮಾರ್ಗದರ್ಶನದಲ್ಲಿ ಆಗ್ಬೇಕು – ಸ್ವಾಮಿ ವಿವೇಕ ಚೈತನ್ಯಾನಂದ
ಕಲ್ಲಡ್ಕ: ಹಿಂದೂ ಸಮಾಜ ಗಟ್ಟಿ ಆಗಬೇಕಾದರೆ ಧರ್ಮ ಅನುಷ್ಠಾನ ಸರಿಯಾದ ಮಾರ್ಗದರ್ಶನದಲ್ಲಿ ಆಗ್ಬೇಕು. ಸಾಧು ಸಂತರು, ಅವತಾರ ಪುರುಷರು, ಮಹನೀಯರು, ದಾರ್ಶನಿಕರು ನೀಡಿದ ಸಂದೇಶವನ್ನು ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನದಲ್ಲಿ ನೀಡಬೇಕು ಎಂದು ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.
ಅವರು ಅಕ್ಟೋಬರ್ 12ರಂದು ಶನಿವಾರ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಶಾರದಾ ಭಜನಾ ಮಂದಿರದಲ್ಲಿ 40ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದಾ ಉಸ್ತವ ಸಮಿತಿ ಅಧ್ಯಕ್ಷ ದಿನೇಶ್ ಪೂಜಾರಿ ವಹಿಸಿದ್ದರು. ಸಭಾ ಕಾರ್ಯಕ್ರಮದ ಮೊದಲು ಸ್ವಾಮಿ ವಿವೇಕ ಚೈತನ್ಯಾನಂದರವರ ಉಪಸ್ಥಿತಿಯಲ್ಲಿ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ ಜರಗಿತು.
ಧಾರ್ಮಿಕ ಉಪನ್ಯಾಸ ನೀಡಿದ ವಿಟ್ಲ ಜೆ.ಸಿ. ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಏರುoಬು ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಗಳನ್ನಾಗಿಸಿ. ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಎಂದರು. ಈ ಸಂದರ್ಭದಲ್ಲಿ ಶಾರದ ಪೂಜಾ ಮಹೋತ್ಸವದ ಪ್ರಯುಕ್ತ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ನಾರಾಯಣ ಭಟ್ ಬೆತ್ತಸರವು, ಆನಂದ ಆಳ್ವ ಗೋಳ್ತಾಮಜಲ್ ಉಪಸ್ಥಿತರಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕೆ.ಎಂ.ಎಫ್. ವಿಸ್ತರಣಾಧಿಕಾರಿ ಜಗದೀಶ್ ಎ. ಕಾರ್ಯಕ್ರಮ ನಿರೂಪಿಸಿದರು.