ಬೆಳಾಲು ಗ್ರಾಮದ ಅನಂತೋಡಿ ದೇವಸ್ಥಾನದ ವಠಾರದಲ್ಲಿ ಯುವಸಿರಿ – ರೈತ ಭಾರತದ ಐಸಿರಿ ಕಾರ್ಯಕ್ರಮ
ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಘಟಕದ ಸುವರ್ಣಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಕಾಲೇಜಿನ ಕ್ರೀಡಾಸಂಘ, ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿಕ್ಲಬ್, ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಅನಂತೋಡಿ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 20ರಂದು ಭಾನುವಾರ ದೇವಸ್ಥಾನದ ವಠಾರದಲ್ಲಿರುವ ನಾಲ್ಕೂವರೆ ಎಕ್ರೆ ಗದ್ದೆಯಲ್ಲಿ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕದ ಸ್ವಯಂಸೇವಕರು ಹಾಗೂ ಎಸ್.ಡಿ.ಎಂ. ಕ್ರೀಡಾ ಸಂಘದ ಸದಸ್ಯರು “ಯುವಸಿರಿ, ರೈತ ಭಾರತದ ಐಸಿರಿ” ಕಾರ್ಯಕ್ರಮದಡಿಯಲ್ಲಿ ನೇಜಿನಾಟಿ ಮಾಡಲಿದ್ದಾರೆ ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್ ತಿಳಿಸಿದರು.
ಅವರು ಮಂಗಳವಾರ ಉಜಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ನೇಜಿ ನಾಟಿಯಲ್ಲಿ ಭಾಗವಹಿಸಲಿದ್ದು, ಮುಂದೆ ಬೆಳೆಯ ರಕ್ಷಣೆ, ಕಟಾವು ಮಾಡಿ ಭತ್ತದಿಂದ ಅಕ್ಕಿ ಪಡೆದು ಅಕ್ಕಿಯನ್ನು ಸ್ಥಳೀಯ ದೇವಸ್ಥಾನಗಳಿಗೆ ಅರ್ಪಿಸಲಾಗುವುದು. ಬೈಹುಲ್ಲನ್ನು “ನಂದಗೋಕುಲ” ಗೋಶಾಲೆಗೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹೇಶ್ ಕುಮಾರ್ ಶೆಟ್ಟಿ ಮಾತನಾಡಿ, ಯುವಜನತೆ ದೇಶದ ಅಮೂಲ್ಯ ಮಾನವಸಂಪನ್ಮೂಲವಾಗಿದ್ದು, ಕೃಷಿಯಲ್ಲಿ ಖುಷಿ ಕಾಣಬೇಕು ಹಾಗೂ ಕೃಷಿ ಭೂಮಿಯ ಸಮರ್ಪಕ ಬಳಕೆಯಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಉಜಿರೆಯ ಸೋನಿಯಾ ವರ್ಮ ನೇಜಿನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕೃಷಿ ಋಷಿ ಬಿ.ಕೆ. ದೇವರಾವ್ ಅವರನ್ನು ಗೌರವಿಸಲಿರುವುದು. ಚೈತ್ರೇಶ್ ಇಳಂತಿಲ ಶುಭಾಶಂಸನೆ ಮಾಡಿದರು. ರಾಜೇಶ್ ಪೈ, ಸಂದೀಪ್ ಕುಮಾರ್ ಮತ್ತು ಶ್ರೀಧರ ಕೆ.ವಿ. ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು. ಬದುಕು ಕಟ್ಟೋಣ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.