ಕೊಡಾಜೆ ಐಕ್ಯ ವೇದಿಕೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಬಂಟ್ವಾಳ : ಕೊಡಾಜೆ ಐಕ್ಯ ವೇದಿಕೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಬಳಿಯಿಂದ ಗಣೇಶ ನಗರ ಬಸ್ ನಿಲ್ದಾಣದ ತನಕ ಇತ್ತೀಚೆಗೆ ನಡೆಯಿತು. ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಮಾತನಾಡಿ, ಸ್ವಚ್ಚತಾ ಕಾರ್ಯಕ್ರಮದ ಮೂಲಕ ನೀಡುವ ಸಂದೇಶ ಮಹತ್ತರವಾದುದು, ಪ್ರತಿಯೊಬ್ಬರೂ ತಮ್ಮ ಮನೆ, ವಠಾರ ಮತ್ತು ಪರಿಸರದಲ್ಲಿ ಸ್ವಚ್ಚತೆ ಬಗ್ಗೆ ಕಾಳಜಿ ವಹಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭಗೊಂಡ ಕೊಡಾಜೆಯ ಐಕ್ಯ ವೇದಿಕೆಯು ಇದೀಗ ಸಮಾಜಮುಖಿ ಕಾರ್ಯದ ಜೊತೆಗೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಐಕ್ಯ ವೇದಿಕೆಯ ಪ್ರಮುಖರಾದ ಗುಲ್ಜಾರ್ ರಝಾಕ್ ಅನಂತಾಡಿ ಅಧ್ಯಕ್ಷತೆ ವಹಿಸಿದ್ದರು. ನೇರಳಕಟ್ಟೆ ಮಿಲಾದ್ ಕಮಿಟಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ನಾಟಿ ವೈದ್ಯ ಗಂಗಾಧರ ಪಂಡಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವ ವಾಹಿನಿ ಮಾಣಿ ಘಟಕದ ನಿಕಟಪೂರ್ವ ಅಧ್ಯಕ್ಷ ರವಿಚಂದ್ರ ಬಾಬನಕಟ್ಟೆ, ಪ್ರಮುಖರಾದ ನಾಸಿರ್ ಕೊಡಾಜೆ, ವಿಕೇಶ್ ಶೆಟ್ಟಿ, ಮಂಜುನಾಥ ಮಾಣಿ, ಹಮೀದ್ ಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಕ್ಯ ವೇದಿಕೆಯ ಶರೀಫ್ ಅನಂತಾಡಿ ಸ್ವಾಗತಿಸಿ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.