ಬಾರದ ಲೋಕಕ್ಕೆ ಪಯಣ ಬೆಳೆಸಿದ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ
ಯಕ್ಷಗಾನ ಹಾಸ್ಯ ಲೋಕಕ್ಕೆ ನವ ಮೆರಗು ನೀಡಿದ್ದ ಕಲಾವಿದ ಕಣ್ಮರೆ
ಬಂಟ್ವಾಳ : ಯಕ್ಷಗಾನ ಪ್ರದರ್ಶನಕ್ಕೆಂದು ಬೆಂಗಳೂರಿಗೆ ತೆರಳಿದ್ದ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಇಂದು ಅಕ್ಟೋಬರ್ 21ರಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹಿರಿಯ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಇಂದಿನಿಂದ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ಬೆಳಗ್ಗೆ ಬೆಂಗಳೂರಿನ ಆರ್.ಕೆ. ಭಟ್ಟರ ಮನೆಗೆ ತೆರಳಿದ್ದರು. ಹೃದಯ ಸ್ತಂಭನವಾದಾಗ ಜತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇದೀಗ ಸ್ಥಳೀಯ ಆಸ್ಪತ್ರೆಯಲ್ಲಿರುವ ಮೃತದೇಹ ಆರ್.ಕೆ. ಭಟ್ಟರ ಮನೆಗೆ ಅಂತಿಮ ದರ್ಶನಕ್ಕೆ ತರಲಾಗುವುದು. ಬಳಿಕ ಆಂಬುಲೆನ್ಸ್ ಮೂಲಕ ಊರಿಗೆ ಸಾಗಲಿದೆ ಎಂದು ಭಾಗವತರಾದ ಗಿರೀಶ್ ರೈ ಕಕ್ಕೆಪದವು ತಿಳಿಸಿದ್ದಾರೆ.