ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ. ಇವರಿಗೆ ರಾಜ್ಯಮಟ್ಟದ “ವಿದ್ಯಾರತ್ನ” ಪ್ರಶಸ್ತಿ
ಬಂಟ್ವಾಳ : ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (RUPSA) ಕೊಡಮಾಡುವ ರಾಜ್ಯ ಮಟ್ಟದ “ವಿದ್ಯಾರತ್ನ” ಪ್ರಶಸ್ತಿಯು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸುಪ್ರಿಯಾ ಡಿ. ಇವರಿಗೆ ಲಭಿಸಿರುತ್ತದೆ. ಅಕ್ಟೋಬರ್ 21ರಂದು ಬೆಂಗಳೂರಿನ ಜುಬಿಲಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಮಂಗಳೂರಿನ ಜೆಪ್ಪು ನಿವಾಸಿ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಸಂತ ಕುಮಾರ್ ಇವರ ಪತ್ನಿಯಾಗಿರುವ ಸುಪ್ರಿಯಾ ಡಿ. ಕನ್ನಡ ಸ್ನಾತಕೋತ್ತರ ಪದವೀಧರೆ. ಇವರು ಕಳೆದ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ. ಕಳೆದ 8 ವರ್ಷಗಳಿಂದ ಗೈಡ್ ಕ್ಯಾಪ್ಟನ್ ಆಗಿರುವ ಇವರು ಅನೇಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ರಾಜ್ಯ ಪುರಸ್ಕಾರ ಪಡೆಯುವಂತೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಕವಿಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕಿರು ಚಿತ್ರಗಳಿಗೆ ಗೀತ ಸಾಹಿತ್ಯ ರಚನೆ ಹಾಗೂ ಬಾಲವಿಕಾಸ ಶಾಲೆಯ ಮಕ್ಕಳು ಅಭಿನಯಿಸಿದ “ಯಂತ್ರ ಯಾನ” ವಿಜ್ಞಾನ ನಾಟಕವನ್ನು ರಚಿಸುವ ಮೂಲಕ ಪ್ರಶಸ್ತಿ ಲಭಿಸುವಂತೆ ಮಾಡಿದ್ದಾರೆ. ಇವರೊಬ್ಬ ಉತ್ತಮ ಕವಯಿತ್ರಿಯಾಗಿದ್ದು ವಿದ್ಯಾರ್ಥಿ ಕವಿಗೋಷ್ಠಿಯನ್ನು ಸಹ ನಡೆಸುತ್ತಿದ್ದಾರೆ. ರಾಜ್ಯಮಟ್ಟದ ಕವಿ ಕಾವ್ಯ ಕಮ್ಮಟದಲ್ಲಿ ಕವನ ವಾಚನ ಮಾಡಿ ಪುರಸ್ಕೃತರಾಗಿದ್ದಾರೆ. ನೂರಕ್ಕಿಂತಲೂ ಅಧಿಕವಾಗಿ ಕಾರ್ಯಕ್ರಮ ನಿರೂಪಣೆ ಮಾಡಿ “ಉತ್ತಮ ನಿರೂಪಕಿ” ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಶಿಕ್ಷಣ ಸಂಬಂಧಿತ ಸಾಕ್ಷ್ಯಚಿತ್ರಗಳಿಗೆ ಹಿನ್ನೆಲೆ ಧ್ವನಿಯಾಗುತ್ತಿರುವ ಇವರು ತಮ್ಮ ಅದ್ಭುತ ಬೋಧನಾ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳ ನೆಚ್ಚಿನ ಕನ್ನಡ ಶಿಕ್ಷಕಿಯೂ ಹೌದು.
ಈ ಹಿಂದೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಸಹ ಶಿಕ್ಷಕಿಯಾಗಿ ಹಾಗೂ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಪ್ರಸ್ತುತ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಿಂದ ಗುರುತಿಸಿಕೊಂಡು 2024-25ನೇ ಶೈಕ್ಷಣಿಕ ವರ್ಷದಲ್ಲಿ ಬಂಟ್ವಾಳ ತಾಲೂಕಿನಿಂದ ರಾಜ್ಯಮಟ್ಟದ “ವಿದ್ಯಾರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ.