ಬಂಟ್ವಾಳ ಪುರಸಭೆ ನವಂಬರ್ 23ರಂದು ಉಪ ಚುನಾವಣೆ, 26ರಂದು ಫಲಿತಾಂಶ
ಬಂಟ್ವಾಳ : ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಿದ್ದು, ನವಂಬರ್ 23 ರಂದು ಮತದಾನ ನಡೆಯಲಿದ್ದು 26ಕ್ಕೆ ಫಲಿತಾಂಶ ಹೊರ ಬೀಳಲಿದೆ. ಬಂಟ್ವಾಳ ಪುರಸಭೆಯ ವಾರ್ಡ್ 2ರ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದ ಗಂಗಾಧರ್ ಅವರು ಲೋಕಸಭಾ ಚುನಾವಣೆಯ ಸಂದರ್ಭ ಪಕ್ಷ ತೊರೆದು ಬಿಜೆಪಿ ಸೇರಿದ್ದು, ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಏಕೈಕ ನಗರ ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆಯುತ್ತಿದೆ.
ನವಂಬರ್ 4ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 12ರಂದು ನಾಮಪತ್ರ ಪರಿಶೀಲನೆ, 14ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 23ರಂದು ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಚುನಾವಣೆ ನಡೆಯಲಿದ್ದು 25ಕ್ಕೆ ಅವಶ್ಯವಿದ್ದರೆ ಮರು ಮತದಾನಕ್ಕೆ ಮೀಸಲು ದಿನವಾಗಿದೆ. 26ರಂದು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಗ್ರಾಮ ಪಂಚಾಯತ್ ಗಳಿಗೆ ಉಪಚುನಾವಣೆ
ಗ್ರಾಮ ಪಂಚಾಯತುಗಳಲ್ಲೂ ಹಲವು ಕಾರಣಕ್ಕೆ ತೆರವಾಗಿರುವ ಸ್ಥಾನಗಳಿಗೂ ಉಪ ಚುನಾವಣೆ ಘೋಷಣೆಯಾಗಿದ್ದು, ನವಂಬರ್ 23ರಂದು ಮತದಾನ ನಡೆದು, 26ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮ ಪಂಚಾಯತ್ ನ 3 ಸ್ಥಾನ, ಪಂಜಿಕಲ್ಲು 2, ಮಂಚಿ, ಪೆರ್ನೆ, ಚೆನ್ನೆತ್ತೋಡಿ, ಸಜೀಪಮೂಡ, ಅಮ್ಟಾಡಿ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಗಳ ತಲಾ 1 ಸ್ಥಾನ, ಬೆಳ್ತಂಗಡಿ ತಾಲೂಕಿನ ಉಜಿರೆ, ಕುವೆಟ್ಟು, ಇಳಂತಿಲ ಗ್ರಾಮ ಪಂಚಾಯತ್ ಗಳ ತಲಾ 1 ಸ್ಥಾನ, ಸುಳ್ಯ ತಾಲೂಕಿನ 22-ಕೊಲ್ಲಮೊಗ್ರು, ಮಂಡೆಕೋಲು, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಗಳ ತಲಾ 1 ಸ್ಥಾನ, ಕಡಬ ತಾಲೂಕಿನ ಸುಬ್ರಹ್ಮಣ್ಯ, ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಗಳ ತಲಾ 1 ಸ್ಥಾನ, ಪುತ್ತೂರು ತಾಲೂಕಿನ ಅರಿಯಡ್ಕ, ಕೆದಂಬಾಡಿ ಗ್ರಾಮ ಪಂಚಾಯತ್ ಗಳ ತಲಾ 1 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ನವಂಬರ್ 6ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, 12 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 13ರಂದು ನಾಮಪತ್ರ ಪರಿಶೀಲನೆ, 15ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 23ರಂದು ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಚುನಾವಣೆ ನಡೆದು, 25ಕ್ಕೆ ಅವಶ್ಯವಿದ್ದರೆ ಮರು ಮತದಾನಕ್ಕೆ ಮೀಸಲು ದಿನವಾಗಿದೆ. 26ರಂದು ಆಯಾಯ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.