ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಪ್ರಕರಣ ಆರೋಪಿಗಳು ಖುಲಾಸೆ

ಪುತ್ತೂರು : ಪೊಲೀಸ್ ಸಿಬ್ಬಂದಿಗಳು ಇಂಟರ್ಸೆಪ್ಟರ್ ವಾಹನದಲ್ಲಿ ಪುತ್ತೂರು ತಾಲೂಕು ಉಪ್ಪಿನಂಗಡಿ ಕಸಬಾ ಗ್ರಾಮದ ಉಪ್ಪಿನಂಗಡಿ ಸುದರ್ಶನ್ ಎಂಬವರ ಮನೆ ಎದುರು ಉಪ್ಪಿನಂಗಡಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಗುರುವಾಯನಕೆರೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಮೇದಾರಬೆಟ್ಟು ಸಿದ್ದಿಕ್ ಎಂಬಾತನು ಹೆಲ್ಮೆಟ್ ಧರಿಸದೆ ಬರುತ್ತಿದ್ದದ್ದನ್ನು ಕಂಡು ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಅದನ್ನು ಉಲ್ಲಂಘಿಸಿ ಮುಂದಕ್ಕೆ ಹೋದಾಗ ಜೊತೆಯಲ್ಲಿದ್ದ ಹೋಂ ಗಾರ್ಡ್ ಸೈಯದ್ ಇಬ್ರಾಹಿಂರವರು ತಡೆದು ನಿಲ್ಲಿಸಿ ದ್ವಿಚಕ್ರ ಸವಾರನಿಗೆ ವಾಹನದ ದಾಖಲಾತಿಗಳನ್ನು ಹಾಜರುಪಡಿಸುವಂತೆ ತಿಳಿಸಿದರು. ಆರೋಪಿತನು ಏರು ಧ್ವನಿಯಲ್ಲಿ ಬೈದು ದಾಖಲಾತಿಗಳನ್ನು ಹಾಜರಿಪಡಿಸದೆ ಸೈಯದ್ ಇಬ್ರಾಹಿಂರವರಿಗೆ ಕೈ ಮಾಡಲು ಮುಂದೆ ಬಂದಿದ್ದು ಈ ಸಮಯ ಅದನ್ನು ನೋಡಿದ ಎ.ಎಸ್.ಐ. ರುಕ್ಮಯ ಗೌಡರವರು ಅಲ್ಲಿಗೆ ಬರುತ್ತಿದ್ದಂತೆ ಆರೋಪಿತನೊಂದಿಗೆ ಇದ್ದ ಇನ್ನೂ ಮೂವರು ವ್ಯಕ್ತಿಗಳು ಕರ್ತವ್ಯದಲ್ಲಿದ್ದ ಪೊಲೀಸರರಿಗೆ ಬೆದರಿಕೆ ಹಾಕಿ ವಾಹನದೊಂದಿಗೆ ಪರಾರಿಯಾಗಿದ್ದರು.
ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ದೂರಿನ ಅನ್ವಯ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದೋಷಾರೋಪನ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯವು ಸಾಕ್ಷಿಗಳ ವಿಚಾರಣೆಯನ್ನು ನಡೆಸಿ, ಅಭಿವಜನಾ ಪರ ಮತ್ತು ಆರೋಪಿಯ ಪರ ವಕೀಲರ ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಸದರಿ ಪ್ರಕರಣವನ್ನು ಅಭಿಯೋಜನೆಯು ಸಂಶಯಾತೀತವೆಂದು ನಿರೂಪಿಸಲು ವಿಫಲವಾದ ಕಾರಣ ಸದ್ರಿ ಪ್ರಕರಣದ ಆರೋಪಿಗಳಾದ ಅಬೂಬಕ್ಕರ್ ಸಿದ್ದೀಕ್ ಮತ್ತು ಶುಕ್ರು ಇವರನ್ನು ದೋಷಮುಕ್ತ ಗೊಳಿಸಿದರು. ಆರೋಪಿಗಳ ಪರವಾಗಿ ಪ್ರತಿಷ್ಠಿತ ಕಜೆ ಲಾ ಚೇಂಬರ್ಸ್ ನ ವಕೀಲರಾದ ಶ್ರೀ ಮಹೇಶ್ ಕಜೆ ಇವರು ವಾದಿಸಿದ್ದರು.