November 11, 2024
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವೀರಕಂಭ ಮಜಿ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಾಗೂ ಸಮಗ್ರ ಶಿಕ್ಷಣ ಸಾಮಾಜಿಕ ಶೋಧನಾ ಪೋಷಕರ ಸಭೆ

ಬಂಟ್ವಾಳ : ಸರಕಾರಿ ಶಾಲೆಗಳು ಇಂದು ಎಲ್ಲಾ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಿದ್ದು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಉತ್ತಮವಾದ ವಾತಾವರಣವನ್ನು ಬೆಳೆಸಿಕೊಂಡಿದೆ. ಅಕ್ಷರ ದಾಸೋಹದ ಉಪಯೋಗವನ್ನು ಎಲ್ಲಾ ಮಕ್ಕಳು ಬಳಸಿಕೊಳ್ಳುತ್ತಿದ್ದು ಇದು ಮಕ್ಕಳ ಆರೋಗ್ಯದ ಮೇಲೆ ಮತ್ತು ದೈಹಿಕ ಮಾನಸಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ತಂದುಕೊಟ್ಟಿದೆ, ಸರಕಾರದಿಂದ ಒದಗಿಸಿ ಕೊಟ್ಟಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರತಿ ಮಗು ಪಡೆದುಕೊಳ್ಳಬೇಕು ಇದರಿಂದ ಶಾಲೆಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ದೊರಕಿದಂತಾಗುತ್ತದೆ, ಜೊತೆಗೆ ಬೇರೆ ಬೇರೆ ಇಲಾಖೆಗಳು ನೀಡುವ ಶೈಕ್ಷಣಿಕ ಪ್ರೋತ್ಸಾಹಗಳನ್ನು ಬಳಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕಿನ ಅಕ್ಷರ ದಾಸೋಹದ ನಿರ್ದೇಶಕರಾದ ನೋಣಯ್ಯ ನಾಯ್ಕ್ ಹೇಳಿದರು.

ಅವರು ಅಕ್ಟೋಬರ್ 29ರಂದು ಮಂಗಳವಾರ ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ 2024- 25ನೇ ಸಾಲಿನ ಮೊದಲ ಶೈಕ್ಷಣಿಕ ಸಮುದಾಯದತ್ತ ಕಾರ್ಯಕ್ರಮ ಹಾಗೂ ಸಮಗ್ರ ಶಿಕ್ಷಣ ಸಾಮಾಜಿಕ ಪರಿಶೋಧನಾ ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ ವಹಿಸಿದ್ದರು.

ವಿದ್ಯಾರ್ಥಿಗಳಲ್ಲಿ ಉತ್ತಮ ಸಾಮರ್ಥ್ಯಗಳು ಇದೆ. ಇದಕ್ಕಾಗಿ ಶಿಕ್ಷಕರು ನಿರಂತರ ಶ್ರಮ ಪಡುತ್ತಿದ್ದಾರೆ. ಇದಕ್ಕಾಗಿ ಪೋಷಕರ ಬೆಂಬಲ ಅತೀ ಅಗತ್ಯವಾಗಿದೆ. ಪೋಷಕರು ಮತ್ತು ಶಿಕ್ಷಕರು ಜೊತೆಯಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾದ ವಾತಾವರಣವನ್ನು ಒದಗಿಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರವೇ ವಿದ್ಯಾರ್ಥಿಗಳಲ್ಲಿ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಈ ಮೂಲಕ ಉತ್ತಮ ಶಿಕ್ಷಣವನ್ನು ದೊರಕಿಸುವಂತೆ ಮಾಡುವಲ್ಲಿ ಸಹಾಯವಾಗಿ ತನ್ನ ಕೊಡುಗೆಯಾಗಿ ಶಾಲೆಗೆ ಸ್ಮಾರ್ಟ್ ಟಿವಿ ಹಸ್ತಾಂತರ ಮಾಡಿ ಉದ್ಯಮಿ ಯತಿನ್ ಕುಮಾರ್ ಏಳ್ತಿಮಾರ್ ಮಾತನಾಡಿದರು.

ಸದ್ರಿ ವರ್ಷ ಶಾಲೆಯ ಸಾಮಾಜಿಕ ಪರಿಶೋಧನಾ ತಂಡದಿಂದ ಶಾಲೆಗೆ ಆಗಮಿಸಿ ಶಾಲೆಯ ಮತ್ತು ಸಮುದಾಯದ ಬಗ್ಗೆ ವಿವರವಾಗಿ ಮಾಹಿತಿಯನ್ನು ಪಡೆದುಕೊಂಡ ಸಾಮಾಜಿಕ ಪರಿಶೋಧನಾ ತಂಡದ ಮುಖ್ಯಸ್ಥೆ ಅಂಜಲಿ ಶೇಠ್ ವರದಿಯನ್ನು ಮಂಡಿಸಿ, ಶಾಲೆಯು ಪರಿಸರ ಜೊತೆಗೆ ಮತ್ತು ಪೋಷಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಪ್ರೋತ್ಸಾಹಕ ಮಾತುಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ 2024- 25ನೇ ಸಾಲಿನ ರಾಜ್ಯಮಟ್ಟದಲ್ಲಿ “ಶಿಕ್ಷಕರತ್ನ ಪ್ರಶಸ್ತಿ”ಯನ್ನು ಪಡೆದ ಶಾಲಾ ಸಹ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಹಾಗೂ ತನ್ನ ನಿರಂತರ ಸಮಾಜಸೇವೆಗಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು “ಸಮಾಜ ಸೇವಾ ರತ್ನ ಪ್ರಶಸ್ತಿ”ಯನ್ನು ಪಡೆದಿರುವ ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ ನ ಮಾಲಕ ಮಹಮ್ಮದ್ ಶರೀಫ್ ಇವರನ್ನು ಶಾಲಾ ವತಿಯಿಂದ  ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘ, ಮಕ್ಕಳ ಪೋಷಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

 

ಈ ಸಂದರ್ಭದಲ್ಲಿ ಕ್ಯಾನ್ಸರ್ ಪೀಡಿತರಿಗೆ ತಮ್ಮ ಕೂದಲು ದಾನ ಮಾಡಿದ ಇಬ್ಬರು ಶಾಲಾ ವಿದ್ಯಾರ್ಥಿಗಳಾದ ಪ್ರಾಪ್ತಿ ಹಾಗೂ ಚಿರಣ್ಯ ಮತ್ತು ಶಾಲೆಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿರುವವರನ್ನು ಶಾಲಾ ಪರವಾಗಿ ಅಭಿನಂದಿಸಲಾಯಿತು.  ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾದಕ ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಜಾಗರೂಕತೆಯ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

ಸಭಾಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರುಗಳಾದ ನಿಶಾಂತ್ ರೈ, ರಘು ಪೂಜಾರಿ,  ಅಬ್ದುಲ್ ರೆಹಮಾನ್, ಗೀತಾ ಜಯಶೀಲಾ ಗಾಂಭೀರ, ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಪುಷ್ಪ, ಕಾರ್ಯದರ್ಶಿ ಸವಿತಾ, ತಾಲೂಕು ಪಂಚಾಯತ್  ತಾಂತ್ರಿಕ ಸಹಾಯಕ ಅಭಿಯಂತರರಾದ ಸಿವಿಲ್ ವಿಭಾಗದ ನಳಿನಾಕ್ಷಿ, ತೋಟಗಾರಿಕೆ ವಿಭಾಗದ ನಯನ, ತಾಲೂಕು ಗ್ರಾಮೀಣ ಉದ್ಯೋಗ ಖಾತರಿಯಾ ಸಿಬ್ಬಂದಿ ವರ್ಗದವರಾದ ಸರಿತಾ ಮತ್ತು ಮಮತ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವನಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮೆಂಡೋನ್ಸಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಪುಷ್ಪಾ ವಂದಿಸಿದರು. ಶಾಲಾ ದೈಹಿಕ ಶಿಕ್ಷಕ ಇಂದು ಶೇಖರ್ ಹಾಗೂ ಸಹ ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.

You may also like

News

ಕರಾವಳಿ ಸುದ್ದಿ ನೂತನ ವೆಬ್ ಸೈಟ್ ಉದ್ಘಾಟನೆ

  ಬಂಟ್ವಾಳ : ಕರಾವಳಿ ಸುದ್ದಿ ವಾರಪತ್ರಿಕೆಯ ನೂತನ ವೆಬ್ ಸೈಟ್ www.karavalisuddi.com ಸಪ್ಟೆಂಬರ್ 8ರ ಭಾನುವಾರ ಲೋಕಾರ್ಪಣೆಗೊಂಡಿತು. ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು
News

ಸೂರಿಕುಮೇರು ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಮೇರಿ ಮಾತೆಯ ವಾರ್ಷಿಕ ಹಬ್ಬ ಮೊಂತಿ ಹಬ್ಬವನ್ನು ಇಂದು ಸಪ್ಟಂಬರ್ 8ರಂದು ವಿಜೃಂಭಣೆ, ಸಂಬ್ರಮ, ಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

You cannot copy content of this page