ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ರಚನೆ

ಬಂಟ್ವಾಳ :ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕವು ಶಂಭೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಇದೇ ನವಂಬರ್ 19ನೇ ದಿನಾಂಕದಂದು ಜರಗಿಸಲಿರುವ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ತಿಳಿಸಿದ್ದಾರೆ.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಗೌರವಾಧ್ಯಕ್ಷರಾಗಿ ಆನಂದ ಎ. ಶಂಭೂರು, ಕಾರ್ಯಾಧ್ಯಕ್ಷರಾಗಿ ಹೇಮಚಂದ್ರ ಭಂಡಾರದ ಮನೆ, ಉಪಾಧ್ಯಕ್ಷರಾಗಿ ರಾಜೇಶ್ ಶಾಂತಿಲ ಮತ್ತು ಹೆನ್ರಿ ಬುಕೆಲ್ಲೊ, ಪ್ರಧಾನ ಕಾರ್ಯದರ್ಶಿಯಾಗಿ ಜಯರಾಮ ಡಿ. ಪಡ್ರೆ ಹಾಗೂ ಕೋಶಾಧಿಕಾರಿಯಾಗಿ ದಯಾನಂದ ಅಡೆಪಿಲ ಸ್ವಾಗತ ಸಮಿತಿಯಲ್ಲಿರುತ್ತಾರೆ. ಬಂಟ್ವಾಳ ತಾಲೂಕು ಕ.ಸಾ.ಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮತ್ತು ಪದಾಧಿಕಾರಿಗಳು ಹಾಗೂ ಮಕ್ಕಳ ಕಲಾಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ಮತ್ತು ಪದಾಧಿಕಾರಿಗಳು ಸಮ್ಮೇಳದ ಯಶಸ್ಸಿಗೆ ಮಾರ್ಗದರ್ಶನ ನೀಡಲಿದ್ದು ಗ್ರಾಮದ ನಾಗರಿಕರ ತನು ಮನ ಧನ ಮತ್ತು ಸಮಯದ ಸಹಕಾರವನ್ನು ಸ್ವಾಗತ ಸಮಿತಿ ಅಪೇಕ್ಷಿಸಿದೆ ಎಂದೂ ಅವರು ಹೇಳಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಆನಂದ ಎ. ಶಂಭೂರು ಎಲ್ಲರ ಭಾಗೇದಾರಿಕೆಯಿಂದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿ ಗ್ರಾಮದ ಸ್ವಾಭಿಮಾನವನ್ನು ಎತ್ತಿಹಿಡಿಯೋಣ ಎಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.
ಸಮ್ಮೇಳನದಲ್ಲಿ ಸುಮಾರು 750 ವಿದ್ಯಾರ್ಥಿಗಳು ಮತ್ತು ಅದೇ ಪ್ರಮಾಣದಲ್ಲಿ ಹಿರಿಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮ್ಮೇಳನದ ಯಶಸ್ಸಿಗೆ ಸಹಕಾರಿಯಾಗುವಂತೆ ಉಪಸಮಿತಿಗಳನ್ನೂ ರಚಿಸಲಾಗಿದೆ. ಈ ಉಪಸಮಿತಿಗಳಲ್ಲಿ ಊರ ಗಣ್ಯರು, ಶಾಲಾ ಎಸ್.ಡಿ.ಎಂ.ಸಿ. ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳೆಲ್ಲರನ್ನೂ ಜೋಡಿಸಲಾಗಿದೆ. ಮೆರವಣಿಗೆ, ಸ್ವಾಗತ ಮತ್ತು ಆತಿಥ್ಯ, ಊಟೋಪಚಾರಗಳ ನಿರ್ವಹಣೆಗಳ ಬಗ್ಗೆ ಸ್ವಾಗತ ಸಮಿತಿ ಚರ್ಚಿಸಿದೆ. ಶಂಭೂರಿನ ಪರಿಸರದ ಎಲ್ಲ ಸಂಘ ಸಂಸ್ಥೆಗಳ ವಿಶ್ವಾಸವನ್ನು ಪಡೆದು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಕುರಿತು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ವಿವರಿಸಿದರು. ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿ ವಂದಿಸಿದರು.