ಸಾಹಿತ್ಯ ತಾರೆ ಪ್ರಶಸ್ತಿಗೆ ಆಯ್ಕೆಯಾದ ಬಂಟ್ವಾಳ ತಾಲೂಕಿನ ಓಜಾಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ

ಬಂಟ್ವಾಳ : ಮಕ್ಕಳ ಕಲಾ ಲೋಕ ವತಿಯಿಂದ ನವಂಬರ್ 19ರಂದು ಬಂಟ್ವಾಳ ತಾಲೂಕಿನ ಶಂಭೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿರುವ ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಶಾಲೆಗೆ ನೀಡಲಾಗುವ ಸಾಹಿತ್ಯ ತಾರೆ ಪ್ರಶಸ್ತಿಗೆ ಓಜಾಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಶಾಲೆಯು ಸಾಹಿತ್ಯಾದಿ ಚಟುವಟಿಕೆಗಳನ್ನು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ತಿಳಿಸಿದ್ದಾರೆ.
ದಾಖಲಾತಿ ಕುಸಿದು ಹದಿನೇಳು ಮಕ್ಕಳನ್ನು ಹೊಂದಿ ಮುಚ್ಚುವ ಸ್ಥಿತಿಗಿಳಿದಿದ್ದ ಓಜಾಲ ಶಾಲೆಯು ಇಂದು 131 ವಿದ್ಯಾರ್ಥಿಗಳಿಂದ ತುಂಬಿ ಕಂಗೊಳಿಸುತ್ತಿದೆ. ಕುಗ್ರಾಮವಾದರೂ ಶಾಲಾ ಶಿಕ್ಷಕರಲ್ಲದೆ, ಹೊರ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ ಕಲೆ ಮತ್ತು ಸಾಹಿತ್ಯ ರಚನೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿಭಾ ದರ್ಪಣದ ಮೂಲಕ ಮಕ್ಕಳ ಸ್ವರಚಿತ ಸಾಹಿತ್ಯ, ಚಿತ್ರಗಳು ಪ್ರಕಟಗೊಳ್ಳುತ್ತಿವೆ. ಗುಬ್ಬಚ್ಚಿ ಸಾಹಿತ್ಯ ಸಂಘದ ಮೂಲಕ ಮಕ್ಕಳ ಸ್ವರಚಿತ ಸಾಹಿತ್ಯದ ವಾರ್ಷಿಕ ಹಸ್ತಪತ್ರಿಕೆ ಚಿಣ್ಣರ ಚಿತ್ತಾರ ಶಾಲಾ ವಾರ್ಷಿಕೋತ್ಸವದಂದು ನಿರಂತರವಾಗಿ ಬಿಡುಗಡೆಯಾಗುತ್ತಿದೆ. ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವೂ ಈ ಶಾಲೆಯಲ್ಲಿ ಜರಗಿರುವುದನ್ನು ಸ್ಮರಿಸಬಹುದು. ಓಜಾಲದ ಓಜ, ಆಶಯ, ನೆಲ ಜಲ, ಜಗದ ನಿಯಮ, ಜ್ಞಾನಾಮೃತ ಮೊದಲಾದ ಮಕ್ಕಳ ಕೃತಿಗಳನ್ನು ಈ ಶಾಲೆಯಲ್ಲಿ ಮುದ್ರಿಸಿ ಪ್ರಕಟಿಸಲಾಗಿರುವುದು ಓಜಾಲ ಶಾಲೆಯ ಹೆಗ್ಗಳಿಕೆ ಎಂದು ಬಾಯಾರ್ ತಿಳಿಸಿದರು.