ಬೆಳ್ಳಿಹಬ್ಬ ಆಚರಿಸಿದ ಕಥೊಲಿಕ ಉದ್ಯಮಿಗಳ ಸಂಸ್ಥೆ ‘ರಚನಾ’
ಬೆಳ್ಳಿ ಹಬ್ಬದ ಸವಿ ನೆನಪಿಗೆ ‘ರಚನಾ ಕಥೊಲಿಕ್ ಸೌಹಾರ್ದ ಸಹಕಾರಿ ಸಂಘ ನಿ.’ ಉದ್ಘಾಟನೆ
ಮಂಗಳೂರು : ನವಂಬರ್ 3ರಂದು ಭಾನುವಾರ ಮಂಗಳೂರಿನ ಕಥೊಲಿಕ ಉದ್ಯಮಿಗಳ ಸಂಸ್ಥೆಯಾದ ‘ರಚನಾ ಸಂಸ್ಥೆ’ ಯು ಬೆಳ್ಳಿಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿತು. ಬಹುತೇಕ ಕಥೊಲಿಕ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಕ್ಷಿಯಾದರು.
ನಗರದ ಕುಲಶೇಖರ ಕೋರ್ಡೆಲ್ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್ ಬಿಷಪ್ ಅತೀ ವಂದನೀಯ ಡಾ ಪೀಟರ್ ಮಚಾದೊ ಮಾತನಾಡಿ, “ಕರಾವಳಿಯ ಕ್ರೈಸ್ತ ಯುವ ಸಮುದಾಯ ಉತ್ತಮ ಶಿಕ್ಷಣ ಪಡೆದು ಕೈತುಂಬಾ ಹಣ ಗಳಿಕೆಯ ಉದ್ದೇಶಕ್ಕಾಗಿ ವಿದೇಶದಲ್ಲಿ ಉದ್ಯೋಗ ಪಡೆಯುವತ್ತ ಗಮನಹರಿಸುತ್ತಿರುವುದು ಜಾಸ್ತಿಯಾಗುತ್ತಿದೆ. ಆದರೆ ದೇಶದ ಅಭಿವೃದ್ಧಿಗೆ ಉತ್ತಮ ಐಐಎಸ್, ಐಪಿಎಸ್, ಮಿಲಿಟರಿ ಅಧಿಕಾರಿಗಳು ಹಾಗೂ ಉದ್ಯಮಿಗಳ ಅಗತ್ಯವಿದೆ. ಕ್ರೈಸ್ತ ಯುವ ಜನತೆ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಕ್ಕಳು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುತ್ತಿರುವುದರಿಂದ ಕೆಲವು ಮನೆಗಳ ಹಿರಿಯರಲ್ಲಿ ಅಭದ್ರತೆ ಕಾಡುತ್ತಿರುವುದು ಮಾತ್ರವಲ್ಲದೆ, ಅವರು ವೃದ್ಧಾಶ್ರಮ ಸೇರಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಕಳವಳ ಕೂಡ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಪುಣೆಯ ಮಿಲಿಟರಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಮಾಂಡೆಂಟ್ ರಿಯಲ್ ಅಡ್ಮಿರಲ್ ನೆಲ್ಸನ್ ಡಿಸೋಜ ಮಾತನಾಡಿ, ರಚನಾ ಸಂಸ್ಥೆ ಉದ್ಯಮದ ಜೊತೆಗೆ ಉದ್ಯಮಶೀಲತ್ವವನ್ನು ಬೆಳೆಸುವ ವಿಚಾರದಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದು, ಇದು ಮತ್ತಷ್ಟು ಮುಂದು ವರಿಯುವಂತಾಗಬೇಕು ಎಂದರು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ, ಮಾತನಾಡಿ ರಚನಾ ಸಂಸ್ಥೆಗೆ ಶುಭ ಹಾರೈಸಿದರು. ಈ ವೇಳೆ ಉದ್ಯಮಿಗಳಾದ ಮೈಕಲ್ ಡಿಸೋಜ, ರಚನಾ ಸಂಸ್ಥೆಯ ಅಧ್ಯಕ್ಷ ಜೋನ್ ಮೊಂತೇರೊ, ಸಂಚಾಲಕಿ ಮಾರ್ಜೊರಿ ಟೆಕ್ಸೇರ, ಕಾರ್ಯದರ್ಶಿ ವಿಜಯ್ ವಿಶ್ವಾಸ್ ಲೋಬೊ, ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಜೆ.ಆರ್. ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಚನಾ ಸಂಸ್ಥೆ ಆರಂಭಗೊಂಡ 25 ವರ್ಷಗಳ ಸವಿನೆನಪಿಗಾಗಿ ಕಥೊಲಿಕ ಸಮುದಾಯದ ಯುವ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ‘ರಚನಾ ಕಥೊಲಿಕ್ ಸೌಹಾರ್ದ ಸಹಕಾರಿ ಸಂಘ ನಿ.’ ಇದರ ಸಾಂಕೇತಿಕ ಉದ್ಘಾಟನೆಯು ರೇರ್ ಎಡ್ಮಿರಲ್ ನೆಲ್ಸನ್ ಡಿಸೋಜ ಎನ್.ಎಂ. ಕಮಾಂಡೆಂಟ್ ಮಿಲಿಟರಿ ಇನ್ಸಿಟ್ಯೂಟ್ ಆಫ್ ಟೇಕ್ನಾಲಜಿ ಪುಣೆ, ಇವರ ದಿವ್ಯ ಹಸ್ತದಿಂದ ನೆರವೇರಿತು. ಇವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಆರ್ಚ್ ಬಿಷಪ್, ಬಿಷಪ್ ಹಾಗೂ ಎಲ್ಲಾ ಗಣ್ಯರು ಶಾಲು, ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ನೂತನ ಸಹಕಾರಿ ಸಂಘದ ಮುಖ್ಯ ಪ್ರವರ್ತಕರಾಗಿ ಜೋನ್ ಬಿ. ಮೊಂತೇರೊ ಇವರ ಜೊತೆ ಮಾಜಿ ಶಾಸಕ ಜೆ. ಆರ್. ಲೋಬೊ, ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ತೆಲಿನೊ, ಉದ್ಯಮಿ ರೋಹನ್ ಮೊಂತೇರೊ, ಮಾರ್ಚೊರಿ ಟೆಕ್ಸೇರಾ, ಗಿಲ್ಬರ್ಟ್ ಡಿಸೋಜಾ, ರೊನಾಲ್ಡ್ ಗೋಮ್ಸ್, ಎಲಿಯಾಸ್ ಸಾಂತಿಸ್, ಲೂವಿ ಜೆ. ಪಿಂಟೊ, ನವೀನ್ ಲೋಬೊ, ನೆಲ್ಸನ್ ಮೊಂತೇರೊ, ಸಿ.ಎ. ವಿಕ್ರಮ್ ಸಲ್ಡಾನ್ಹಾ, ಆಲ್ವಿನ್ ಪ್ರಕಾಶ್ ಸಿಕ್ವೇರಾ ಮತ್ತು ಎಡ್ವರ್ಡ್ ಫೆರ್ನಾಂಡಿಸ್ ಇತರ ಪ್ರವರ್ತಕರಾಗಿರುತ್ತಾರೆ.
ರಚನಾ ಸಂಸ್ಥೆ ಆರಂಭಿಸಲು ಪ್ರಥಮವಾಗಿ ಉದ್ಯಮಿಗಳ ಸಹಮಿಲನವನ್ನು ನಡೆಸಿದ ಮಾರಿಟ್ಟೊ ಸಿಕ್ವೇರಾ ಇವರನ್ನು ಸನ್ಮಾನಿಸಲಾಯಿತು. ರಚನಾ ಸಂಸ್ಥೆ ಸ್ಥಾಪನೆ ಮತ್ತು ನಡೆದು ಬಂದ ಹಾದಿಯ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಿತು. ಕಳೆದ 25 ವರ್ಷಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲಾ ಮಾಜಿ ಅಧ್ಯಕ್ಷರಿಗೆ ಆರ್ಚ್ ಬಿಷಪ್ ಅತೀ ವಂದನೀಯ ಡಾ. ಪೀಟರ್ ಮಚಾದೊ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬೆಳ್ಳಿ ಹಬ್ಬದ ಸುಸಂದರ್ಭದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಜೋನ್ ಬಿ. ಮೊಂತೇರೊ ಇವರನ್ನು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇವರು ಸನ್ಮಾನಿಸಿದರು. ಕಾರ್ಯಕ್ರಮದ ಪ್ರಾಯೋಜಕರಲ್ಲಿ ಓರ್ವರಾದ ಮಂಗಳೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರಿಂದ ಅದೃಷ್ಟ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ರಚನಾ ಸಂಸ್ಥೆಯ ಪ್ರಸ್ತುತ ಅಧ್ಯಕ್ಷ ಜೋನ್ ಮೊಂತೇರೊ ಸ್ವಾಗತಿಸಿ, ವಿಜಯ್ ವಿಶ್ವಾಸ್ ಲೋಬೊ ಧನ್ಯವಾದವಿತ್ತರು. ರೋಯ್ ಸ್ಟನ್ ಪಿಂಟೊ ಮತ್ತು ಡಾ. ಜೆಸಿಕಾ ಸೋನಲ್ ಮೊಂತೇರೊ ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.