ಮಂಗಳೂರಿನ ತೊಕ್ಕೊಟ್ಟು ಬಳಿ ಲಾರಿ ಹರಿದು ಮಹಿಳೆ ಸಾವು

ಮಂಗಳೂರು ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಸ್ಕೂಟರ್ ಗುಂಡಿಗೆ ಬಿದ್ದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಮಹಿಳೆ ಮೇಲೆ ಕಂಟೈನರ್ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ತೊಕ್ಕಟ್ಟು ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ನಡೆದಿದೆ.
ಮೃತ ಮಹಿಳೆಯನ್ನು 45 ವರ್ಷ ಪ್ರಾಯದ ರೆಹಮತ್ ಎಂದು ಗುರುತಿಸಲಾಗಿದೆ. ರೆಹಮತ್ ಅವರ ಪತಿ ರಶೀದ್ ಜೊತೆ ಆ್ಯಕ್ಟಿವಾ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ತೊಕ್ಕಟ್ಟು ಬಳಿ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಹದಗೆಟ್ಟ ರಸ್ತೆ ಗುಂಡಿಗೆ ಸ್ಕೂಟರ್ ಬಿದ್ದ ಪರಿಣಾಮ ರಶೀದ್ ಅವರ ಪತ್ನಿ ಸಹ ಸವಾರೆ, ರೆಹಮತ್ ರಸ್ತೆಗೆ ಎಸೆಯಲ್ಪಟ್ಟು ಆಕೆಯ ಮೇಲೆ ಹಿಂದಿನಿಂದ ಬರುತ್ತಿದ ಕಂಟೈನರ್ ಲಾರಿ ಹರಿದಿದೆ. ಸ್ಥಳದಲ್ಲೇ ರೆಹಮತ್ ಸಾವನ್ನಪ್ಪಿದ್ದಾರೆ. ರಶೀದ್ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತೊಕ್ಕಟ್ಟು-ಚೆಂಬುಗುಡ್ಡೆ ಸಂಪರ್ಕದ ಮಂಗಳೂರು ವಿಶ್ವ ವಿದ್ಯಾಲಯ ರಸ್ತೆಯು ಹೊಂಡ ಗುಂಡಿಗಳಿಂದ ಹದಗೆಟ್ಟಿದೆ. ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಸುಮಾರು ಒಂದುವರೆ ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ದಿಢೀರ್ ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಕೊಣಾಜೆ, ಮುಡಿಪು ಇಲ್ಲಿಗೆ ತೆರಳುವ ವಾಹನ ಸವಾರರು ಪರದಾಡುವಂತಾಯಿತು.