ಕರ್ನಾಟಕದ ಹೆಮ್ಮೆಯ KSRTC ಸಂಸ್ಥೆಗೆ ‘ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿ’
ಬೆಂಗಳೂರು: ಕರ್ನಾಟಕದ ಹೆಮ್ಮೆಯ KSRTC ಸಂಸ್ಥೆಗೆ ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಹಂಚಿಕೊಂಡಿದ್ದು, ನಿಗಮಕ್ಕೆ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (PRCI) ಆಯೋಜಿಸಿದ 18ನೇ ವಿಶ್ಚ ಸಂವಹನ ಸಮ್ಮೇಳನ 2024 ರ ವರ್ಷದ ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿಯು ಲಭಿಸಿದೆ. KSRTCಯ ಕಾರ್ಮಿಕ ಸ್ನೇಹಿ, ಪ್ರಯಾಣಿಕ ಸ್ನೇಹಿ ಉಪಕ್ರಮಗಳಿಗೆ ಹಾಗೂ ವಿವಿಧ ಬಸ್ಸುಗಳ ಬ್ರ್ಯಾಂಡಿಂಗ್ ಕಾರ್ಯಕ್ಕೆ ಸದರಿ ಪ್ರಶಸ್ತಿಯು ಲಭಿಸಿರುತ್ತದೆ ಎಂದಿದೆ.
ಶ್ರೀಪಾದ್ ಯೆಸ್ಸೋ ನಾಯ್ಕ್, ರಾಜ್ಯ ಸಚಿವರು, ಭಾರತ ಸರ್ಕಾರ, ಇಂಧನ, ನವೀನ ಮತ್ತು ನವೀಕರಿಸಿದ ಇಂಧನ ಸಚಿವಾಲಯ, ಮತ್ತು 2024ನೇ ವರ್ಷದ ಮಿಸ್ ಗ್ಲೋಬಲ್ ಇಂಡಿಯಾ ಸ್ವೀಸೆಲ್ ಮರಿಯಾ ಫುರ್ಥಾಡೋ, PRCI ರಾಷ್ಟ್ರೀಯ ಅಧ್ಯಕ್ಷೆ ಗೀತಾ ಶಂಕರ್ ಅವರು ಮಂಗಳೂರು ನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ KSRTCಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು ಎಂದಿದೆ.
ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ಹೆಚ್.ಟಿ., ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮತ್ತು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ. ಹೊಸಪೂಜಾರಿ ಅವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ತಿಳಿಸಿದೆ.