ವಿಶುಕುಮಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೀರಪ್ಪ ಮೊಯಿಲಿ ಅನಿಸಿಕೆ

ಪ್ರತಿಭಾವಂತರನ್ನು ಸೃಷ್ಟಿಸಿದ ಮಾನವ ಶಿಲ್ಪಿ
ಮಂಗಳೂರು: ಸಾಹಿತ್ಯ, ನಾಟಕ ಕ್ಷೇತ್ರದ ಧೀಮಂತರಾಗಿ, ಮಿನುಗು ನಕ್ಷತ್ರರಾಗಿ, ದಂತ ಕತೆಯಾಗಿದ್ದ ವಿಶು ಕುಮಾರ್ ಅನೇಕ ಪ್ರತಿಭಾವಂತರನ್ನು ಸೃಷ್ಟಿಸಿದ ಮಾನವ ಶಿಲ್ಪಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಹಾಗೂ ಯುವವಾಹಿನಿ ಪಣಂಬೂರು-ಕುಳಾಯಿ ಘಟಕದ ಅತಿಥ್ಯದಲ್ಲಿ ಉರ್ವಾಸ್ಟೋರ್‌ನ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ನವಂಬರ್ 14ರಂದು ಭಾನುವಾರ 2024ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಜೀವಿತಾವಧಿಯಲ್ಲಿ ಅವರು ತಮ್ಮ ನಾಟಕಗಳ ಮೂಲಕ ರಾಜಕಾರಣಿಗಳನ್ನೂ ಟೀಕಿಸುತ್ತಿದ್ದರು. ನಾವು ರಾಜಕೀಯಕ್ಕೆ ಬರುವಲ್ಲಿಯೂ ವಿಶು ಕುಮಾರ್ ಅವರ ಪ್ರೇರೇಪಣೆ ಇದೆ. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರನ್ನು ನಾಟಕದ ಮೂಲಕ ದೇಶ ಗುರುತಿಸುವಂತೆ ಮಾಡಿದ ಖ್ಯಾತಿ ಹಿರಿಯ ಸಾಹಿತಿ, ನಾಟಕಕಾರ, ಪತ್ರಕರ್ತ ವಿಶು ಕುಮಾರ್ ರದ್ದು ಎಂದವರು ಹೇಳಿದರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಸಾಹಿತಿ ಬರೆಯುವುದು ಇತಿಹಾಸವಲ್ಲ. ಅದು ಕಾದಂಬರಿ, ಆದರೆ ಕವಿ ಮತ್ತು ಸಾಹಿತಿಗಳು ತಮ್ಮ ಭಾಷೆಯಲ್ಲಿ ಹೊಸತನವನ್ನು ಕಟ್ಟುತ್ತಾರೆ. ಸಾಂಸ್ಕೃತಿಕ ಅನನ್ಯತೆಯನ್ನು ಪ್ರತಿಬಿಂಬಿಸುತ್ತಾರೆ. ಎಂದು ವಿಶುಕುಮಾರ್ ಹಾಗೂ ಬಾಬು ಶಿವ ಪೂಜಾರಿ ಬಗ್ಗೆ ಅನಿಸಿಕೆ ಹಂಚಿ ಕೊಂಡರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಬು ಶಿವಪೂಜಾರಿ ಅವರು, ನನ್ನ ಹುಟ್ಟುಭಾಷೆ ಕುಂದಾಪುರ ಕನ್ನಡ, ಆದರೆ ಬಡತನ ಮುಂಬೈನ ಹೊರನಾಡಿಗೆ ಕಳುಹಿಸಿ ಅಲ್ಲಿನ ಭಾಷೆಯೊಂದಿಗೆ ಬೆರೆಯುವಂತೆ ಮಾಡಿತು. ದುಡಿಮೆಯ ಜತೆ ಕಲಿಕೆಯನ್ನು ಮುಂದುವರಿಸಿದ್ದ ನನಗೆ ಶಿಕ್ಷಣಕ್ಕೆ ನೆರವಾಗಿದ್ದು ಮುಂಬೈನಲ್ಲಿ ನಡೆಯುತ್ತಿದ್ದ ರಾತ್ರಿ ಶಾಲೆ. ಅಲ್ಲಿದ್ದ ಬಹುತೇಕ ಉಪಾಧ್ಯಾಯರು ಉಚಿತವಾಗಿ ಶಿಕ್ಷಣ ನೀಡುತ್ತಿದ್ದ ಕಾರಣ ಶಿಕ್ಷಣದ ಜತೆಗೆ ನಾನು ಬರೆಯಲೂ ಕಾರಣವಾಯಿತು. ಅಂತಹ ಉಪಾಧ್ಯಾಯರಿಗೆ ನನಗೆ ಸಿಕ್ಕ ಗೌರವವನ್ನು ಅರ್ಪಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪ್ರಭಾಕರ್ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿಯನ್ನು ಉದಯೋನ್ಮುಖ ಬರಹಗಾರ್ತಿ ರಾಜಶ್ರೀ ಜೆ. ಪೂಜಾರಿಗೆ ಪ್ರದಾನ ಮಾಡಲಾಯಿತು. ಮಂಗಳೂರಿನಲ್ಲಿ ವಿಶುಕುಮಾರ್ ಸ್ಮರಣಾರ್ಥ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಯುವವಾಹಿನಿಯಿಂದ ಮನವಿ ಪತ್ರವನ್ನು ವೀರಪ್ಪ ಮೊಯಿಲಿ ಹಾಗೂ ಡಾ. ಪುರುಷೋತ್ತಮ ಬಿಳಿಮಲೆ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಈ ಸಂದರ್ಭ ಸಲ್ಲಿಸಲಾಯಿತು.
ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಗುರುಬೆಳದಿಂಗಳು ಪೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಅಧ್ಯಕ್ಷರಾದ ಮನೀಷಾ ರೂಪೇಶ್, ಕಾರ್ಯದರ್ಶಿ ಸಚಿನ್ ಜಿ. ಅಮೀನ್ ವಿಶುಕುಮಾರ್ ದತ್ತಿನಿಧಿ ಸಮಿತಿ ಸಂಚಾಲಕ ಸುರೇಶ್ ಪೂಜಾರಿ, ಕಾರ್ಯದರ್ಶಿ ಸಚ್ಚೇಂದ್ರ ಅಂಬಾಗಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟಿ. ಶಂಕರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಿತೇಶ್ ಬಾರ್ಯ ಮತ್ತು ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.