ಉಡುಪಿ ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಡಾ. ಲಾರೆನ್ಸ್ ಡಿಸೋಜ ನಿಧನ – ಶನಿವಾರ ಅಂತ್ಯಕ್ರಿಯೆ
ಉಡುಪಿ ಕ್ರೈಸ್ತ ಧರ್ಮಕ್ಷೇತ್ರದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂದನೀಯ ಡಾ. ಸಿ. ಲಾರೆನ್ಸ್ ಡಿಸೋಜ 75 ವರ್ಷ ಇಂದು ನವಂಬರ್ 12ರಂದು ಮಂಗಳವಾರ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ.
1948ನೇ ನವೆಂಬರ್ 28ರಂದು ಉಡುಪಿಯ ಶಿರ್ವ ಸಮೀಪದ ಪೆರ್ನಾಲ್ ನಲ್ಲಿ ಜನಿಸಿದ ಇವರು 1977ರಲ್ಲಿ ಧರ್ಮಗುರುಗಳಾಗಿ ಯಾಜಕ ದೀಕ್ಷೆಯನ್ನು ಪಡೆದರು. 1977-79ರ ತನಕ ಕುಲಶೇಖರ ಚರ್ಚ್ ಸಹಾಯಕ ಧರ್ಮಗುರುಗಳಾಗಿ, 1979-84ರ ತನಕ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಸಹಾಯಕ ನಿರ್ದೇಶಕರಾಗಿ, 1984-92ರ ತನಕ ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ, 1998-2006ರ ತನಕ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ, 2006-2008ರ ತನಕ ಕುಲಶೇಖರ ಚರ್ಚ್ ಪ್ರಧಾನ ಧರ್ಮಗುರುಗಳಾಗಿ, 2008-2014ರ ತನಕ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ನಿರ್ದೇಶಕರಾಗಿ, 2015-18ರ ತನಕ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಕಾರ್ಯದರ್ಶಿಯಾಗಿ, 2018-2020ರ ತನಕ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ದಶಕಗಳ ಸುದೀರ್ಘ ಧಾರ್ಮಿಕ ಸೇವೆಯ ಬಳಿಕ 2020ರಲ್ಲಿ ತಮ್ಮ ಅನಾರೋಗ್ಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿ ಕಲ್ಯಾಣಪುರದಲ್ಲಿ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್ ನಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರ ನಿಧನಕ್ಕೆ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಗುರುಗಳು ಹಾಗೂ ಭಕ್ತವೃಂದ ಕಂಬನಿ ಮಿಡಿದಿದೆ.
ದೈವಾಧೀನರಾದ ವಂದನೀಯ ಫಾದರ್ ಡಾ. ಲಾರೆನ್ಸ್ ಸಿ. ಡಿಸೋಜಾ ಇವರ ಅಂತ್ಯಕ್ರಿಯೆ ನವೆಂಬರ್ 16 ರಂದು ಶನಿವಾರ ಬೆಳಿಗ್ಗೆ ನಡೆಯಲಿದ್ದು, 8.00 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್ ಇಲ್ಲಿ ಇಡಲಾಗುವುದು. ಬೆಳಿಗ್ಗೆ 9.30ಕ್ಕೆ ಬಲಿಪೂಜೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಉಡುಪಿ ಕ್ರೈಸ್ತ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾದರ್ ಡೆನಿಸ್ ಡೇಸಾ ತಿಳಿಸಿದ್ದಾರೆ.