ಅಂಗಾಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೊಡ್ರಿಗಸ್

ಮಂಗಳೂರು : ಅಲರ್ಜಿ ಸಂಬಂಧಿಸಿದ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಗೊಂಡ ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೊಡ್ರಿಗಸ್ ಅವರ ಅಂಗಾಂಗಗಳನ್ನು ದಾನಮಾಡಲಾಗಿದೆ.
ಬಜ್ಪೆ ಪಡು ಪೆರಾರ ನಿವಾಸಿ ಗ್ರೇಶಿಯನ್ ಅಲೆಕ್ಸ್ ಮತ್ತು ಗ್ರೆಟ್ಟಾ ಪ್ಲಾವಿಯಾ ರೊಡ್ರಿಗಸ್ ದಂಪತಿಯ ಪುತ್ರಿಯಾಗಿರುವ ಗ್ಲೋರಿಯಾ ಒಂದು ವರ್ಷದ ಹಿಂದೆ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪೂರೈಸಿ ಉಪನ್ಯಾಸಕಿ ಹುದ್ದೆಗೆ ಭರ್ತಿಯಾಗಿದ್ದರು. ಕೆಲವು ದಿನಗಳ ಹಿಂದೆ ಊಟ ಮಾಡಿದ ಬಳಿಕ ಅವರ ದೇಹದಲ್ಲಿ ಅಲರ್ಜಿ ಕಾಣಿಸಿಕೊಂಡಿತ್ತು. ಬಳಿಕ ಇದು ಉಲ್ಬಣಗೊಂಡ ಪರಿಣಾಮ ಮೆದುಳಿಗೆ ಹಾನಿಯಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಯುವತಿಯ ರಕ್ಷಣೆಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದರೂ ಯಾವುದೇ ಫಲಕಾರಿಯಾಗದೆ ಅವರು ನವಂಬರ್ 13ರಂದು ಬುಧವಾರ ನಿಧನರಾಗಿದ್ದಾರೆ.
ಗ್ಲೋರಿಯಾ ಅವರ ಮೆದುಳು ನಿಷ್ಕ್ರೀಯಗೊಂಡ ಕಾರಣ ಅವರ ಮನೆಯವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನಲೆ ರೊಡ್ರಿಗಸ್ ಅವರ ಯಕೃತ್ತನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿ.ಜಿ.ಎಸ್. ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮೂತ್ರಪಿಂಡವನ್ನು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಮತ್ತು ಚರ್ಮ ಮತ್ತು ಕಾರ್ನಿಯಾವನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ ವೇಳೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆಕೆಯ ಕುಟುಂಬ ಮತ್ತು ಸ್ನೇಹಿತರು ಹಾಜರಿದ್ದರು. ಆಕೆಯ ಅಕಾಲಿಕ ನಿಧನಕ್ಕೆ ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ, ಸಹೋದ್ಯೋಗಿಗಳು, ಆಡಳಿತ ಮಂಡಳಿ, ಮತ್ತು ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಉಪನ್ಯಾಸಕಿ ಗ್ಲೋರಿಯಾ ರೊಡ್ರಿಗಸ್ ಇವರು ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.