ಕಥೊಲಿಕ್ ಸಭಾ ವಿಟ್ಲ ವಲಯದ ವತಿಯಿಂದ ಬೆಳ್ತಂಗಡಿಯ ಸಿಯೋನ್ ಆಶ್ರಮಕ್ಕೆ ಭೇಟಿ
ವಿಟ್ಲ: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂತ ಜೋನ್ ಪಾವ್ಲ್ ದ್ವಿತೀಯ ಸಮರ್ಪಿತ ವಿಟ್ಲ ವಲಯದ ವತಿಯಿಂದ ಬೆಳ್ತಂಗಡಿಯ ಕಕ್ಕಿಂಜೆ ಗಂಡಿಬಾಗಿಲುನಲ್ಲಿರುವ ಸಿಯೋನ್ ಆಶ್ರಮಕ್ಕೆ ನವಂಬರ್ 13ರಂದು ಬುಧವಾರ ಭೇಟಿ ನೀಡಲಾಯಿತು.
ವಿಟ್ಲ ವಲಯದ ಪ್ರಧಾನ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರ ಮಾರ್ಗದರ್ಶನದಂತೆ, ನಿಕಟ ಪೂರ್ವ ವಲಯ ಅಧ್ಯಕ್ಷ ಆ್ಯಂಟನಿ ಡಿಸೋಜ ಹಾಗೂ ಪ್ರಸ್ತುತ ವಲಯ ಅಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ಇವರ ಮುಂದಾಳತ್ವದಲ್ಲಿ ಸುಮಾರು 56 ಸದಸ್ಯರ ಈ ಸೌಹಾರ್ದ ಭೇಟಿಯನ್ನು ಆಯೋಜಿಸಲಾಗಿತ್ತು.
ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ಇವರು ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು, ಆಶ್ರಮದ ನಿರ್ವಹಣೆ ಕುರಿತಾಗಿ ವಿವರಿಸಿದರು.
ವಿಟ್ಲ ವಲಯದ ವ್ಯಾಪ್ತಿಯ ದೇಲಂತಬೆಟ್ಟು, ಮಾನೆಲ, ವಿಟ್ಲ, ಪೆರುವಾಯಿ, ಶಂಭೂರು, ಸೂರಿಕುಮೇರು ಬೊರಿಮಾರ್ ಹಾಗೂ ಮೊಗರ್ನಾಡ್ ಚರ್ಚ್ ಗಳ ಭಕ್ತಾಧಿಗಳು ದಾನವಾಗಿ ನೀಡಿದ ವಿವಿಧ ನಿತ್ಯ ಉಪಯೋಗಿ ವಸ್ತುಗಳನ್ನು ಹಾಗೂ ಹಣವನ್ನು ಸಂಗ್ರಹಿಸಿ ಆಶ್ರಮಕ್ಕೆ ಸಲ್ಲಿಸಲಾಯಿತು. ಆಶ್ರಮವನ್ನು ಮುನ್ನಡೆಸುತ್ತಿರುವ ಪೌಲೋಸ್ ಇವರ ಸೇವಾ ಕಾರ್ಯವನ್ನು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಇವರು ಪ್ರಶಂಸಿಸಿ, ದೇವರ ಆಶೀರ್ವಾದ ನೀಡಿದರು. ಇದೇ ವೇಳೆ ಸದಸ್ಯರಾದ ಡೋನ್ ಮತ್ತು ಅನಿತಾ ಡಿಸೋಜ ವಿಟ್ಲ ಇವರು ಜಾದೂ ಪ್ರದರ್ಶನ ಮಾಡಿ ಆಶ್ರಮ ನಿವಾಸಿಗಳಿಗೆ ಮನರಂಜನೆ ನೀಡಿ, ಉಲ್ಲಾಸ ಹೆಚ್ಚಿಸಿದರು.
ಭೇಟಿ ತಂಡದ ನೇತೃತ್ವ ವಹಿಸಿದ್ದ ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಹಾಗೂ ರೋಷನ್ ಬೊನಿಫಾಸ್ ಮಾರ್ಟಿಸ್ ಇವರನ್ನು ಇದೇ ವೇಳೆ ಟ್ರಸ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಭೇಟಿ ನೀಡಿದ ತಂಡದ ಸದಸ್ಯರು ಹಾಗೂ ಆಶ್ರಮನಿವಾಸಿಗಳು ಸಹಭೋಜನದಲ್ಲಿ ಭಾಗಿಯಾದರು.