ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಭಾತೃತ್ವದ ಭಾನುವಾರ ವಿಜೃಂಭಣೆಯಿಂದ ಆಚರಣೆ
ಮನುಷ್ಯನ ಜೀವನವೆಂಬುದು ಮೇಣದ ಬತ್ತಿಯಂತೆ ಇರಬೇಕು – ಫಾದರ್ ಅರುಣ್ ವಿಲ್ಸನ್ ಲೋಬೊ
ಬಂಟ್ವಾಳ : ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ನವಂಬರ್ 17ರಂದು ಭಾತೃತ್ವದ ಭಾನುವಾರವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳೂರು ಪದುವಾ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾದರ್ ಅರುಣ್ ವಿಲ್ಸನ್ ಲೋಬೊರವರು ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಮನುಷ್ಯನ ಜೀವನವೆಂಬುದು ಮೇಣದ ಬತ್ತಿಯಂತೆ ಇರಬೇಕು. ಮೇಣದ ಬತ್ತಿ ಹೇಗೆ ತಾನು ಉರಿದು ಪರರಿಗೆ ಬೆಳಕು ನೀಡುತ್ತದೆಯೋ, ಅಂತೆಯೇ ಮನುಷ್ಯನು ಜೀವಿಸುವಾಗ ಪರರ ಜೀವನದಲ್ಲಿ ಬೆಳಕಾಗಿ ಬದುಕಬೇಕು ಎಂದು ಕರೆ ನೀಡಿದರು.
ಬಲಿ ಪೂಜೆಯ ಸಮಯದಲ್ಲಿ ಸೂರಿಕುಮೇರು ಬೊರಿಮಾರ್ ಚರ್ಚ್ ನ ಭಕ್ತಾದಿಗಳ ಶಿಸ್ತು ಮತ್ತು ಪ್ರಭು ಯೇಸು ಕ್ರಿಸ್ತರ ಮೇಲೆ ಇದ್ದ ವಿಶ್ವಾಸಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ, ಫಾದರ್ ಫೆಲಿಕ್ಸ್ ಪಿಂಟೊ ಮತ್ತು ಫಾದರ್ ವಿಕ್ಟರ್ ಡಾಯಸ್ ಬಲಿಪೂಜೆಯ ಸಮಯದಲ್ಲಿ ಸಹಭಾಗಿಗಳಾಗಿದ್ದರು. ಬಲಿಪೂಜೆಯ ಕೊನೆಯಲ್ಲಿ ಪರಮ ಪ್ರಸಾದದ ಭವ್ಯ ಮೆರವಣಿಗೆಯು ಸಾಗಿತು.
ಪರಮ ಪ್ರಸಾದದ ಆಶೀರ್ವಚನದ ನಂತರ ಭಾತೃತ್ವದ ಭಾನುವಾರ ವಿಜೃಂಭಣೆಯಿಂದ ಆಚರಿಸಲು ಸಹಕರಿಸಿದ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಚರ್ಚ್ ಪಾಲನಾ ಸಮಿತಿಯ ಸದಸ್ಯರನ್ನು, ಎಲ್ಲಾ ಸಂಘಗಳ ಅಧ್ಯಕ್ಷರನ್ನು, ಬಲಿಪೀಠ ಸೇವಕರನ್ನು ಮತ್ತು ದಾನಿಗಳಿಗೆ ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ ಮೇಣದ ಬತ್ತಿ ನೀಡಿ ಗೌರವಿಸಿ ಮನಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಎಲ್ಲಾ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.