ಮಂಗಳೂರಿನ ಸೈಂಟ್ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ ‘ಆಗ್ನೇವಾ 2K24’

ಮಂಗಳೂರು : ಸೈಂಟ್ ಆಗ್ನೆಸ್ ಸಿಬಿಎಸ್ಇ ಶಾಲೆಯ 60ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ‘ಆಗ್ನೇವಾ 2k24’ ಪ್ರಕೃತಿ ವಿಷಯಾಧರಿತ ಚರ್ಚೆ, ಮುಖ ಚಿತ್ರಕಲೆ, ವೈವಿಧ್ಯಮಯ ಕಾರ್ಯಕ್ರಮ ಸ್ಪರ್ಧೆಗಳಂತಹ ಅಂತರ್ ಶಾಲಾ ಸ್ಪರ್ಧೆಗಳನ್ನು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ಪ್ರಾಂತೀಯ ಸಹಾಯಕ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿರುವ ವಂದನೀಯ ಭಗಿನಿ ರೋಸ್ ಆಗ್ನೆಸ್ ಇವರು ಅಧ್ಯಕ್ಷರಾಗಿ ಹಾಗೂ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಾಲ್ಟರ್ ಡಿಸೋಜ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಕಾರ್ಯಕ್ರಮ ನಿರೂಪಕರಾಗಿರುವ ವಿ.ಜೆ. ಡಿಕ್ಸನ್, ಭಗಿನಿ ಮರಿಯ ಗ್ಲೋರಿಯಾ, ಪ್ರಾಂಶುಪಾಲರಾದ ಭಗಿನಿ ಮರಿಯ ಸಾರಿಕಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಲಿಸ್ಟನ್ ಡಿಸೋಜ, ಕಾರ್ಯಕ್ರಮ ಸಂಯೋಜಕಿ ಶಿಕ್ಷಕಿ ಜೋಸ್ಪಿನ್ ಉಪಸ್ಥಿತರಿದ್ದರು. ‘ಆಗ್ನೇವಾ 2k24 ‘ ಉದ್ಘಾಟನಾ ಸಮಾರಂಭವು, ಪ್ರಕೃತಿ ಹಾಗೂ ರಕ್ಷಣಾ ಕ್ರಮ ವಿಷಯಾಧರಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡಿತ್ತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಜಂಟಿ ಕಾರ್ಯದರ್ಶಿಯಾಗಿರುವ ಅತೀ ವಂದನೀಯ ಭಗಿನಿ ಡಾ. ಮರಿಯ ರೂಪ, ಉದ್ಯಮಿ ಶಶಿಧರ್ ಡಾರ್ಲ, ಎಕೊಲೆಟ್ಸ್ ಅಕಾಡೆಮಿಯ ಸ್ಥಾಪಕ ಹಾಗೂ ನಿರ್ದೇಶಕ ಪ್ರಸಾದ್ ಅಡಪ್ಪರವರು ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ನೆರವೇರಿಸಿದರು.
ಸ್ಪರ್ಧೆಗೆ ಆಗಮಿಸಿದ 26 ಶಾಲೆಗಳಲ್ಲಿ ಮಂಗಳೂರಿನ ಮೌಂಟ್ ಕಾರ್ಮೆಲ್ ಶಾಲೆಯು ಪ್ರಥಮ ಬಹುಮಾನ ಪಡೆದುಕೊಂಡರೆ, ಶಾರದಾ ವಿದ್ಯಾಲಯವು ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಉತ್ತಮ ನಿರೂಪಣೆಗಾಗಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಲೇಡಿಹಿಲ್ ಶಾಲೆಯು ಪ್ರಥಮ ಹಾಗೂ ಸೈಂಟ್ ಮೇರಿಸ್ ಶಾಲೆಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಹೆತ್ತವರು ಪಾಲ್ಗೊಂಡಿದ್ದರು.