“ಆಧುನಿಕ ಕಾಲಘಟ್ಟದಲ್ಲಿ ಮಾಧ್ಯಮಗಳ ಮೂಲಸ್ವರೂಪ ಬದಲು” – ವಾರ್ತಾಧಿಕಾರಿ ಖಾದರ್ ಶಾ

ರಾಷ್ಟೀಯ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರಿಗೆ ಗೌರವ ಸಮ್ಮಾನ
ಮಂಗಳೂರು: ರಾಷ್ಟೀಯ ಪತ್ರಿಕಾ ದಿನದ ಅಂಗವಾಗಿ ನಗರದ ಹಿರಿಯ ಪತ್ರಿಕಾ ವಿತರಕ ರೇಣುಕಾ ಎಜೆನ್ಸಿಯ ನಾಗರಾಜ್ ಅವರನ್ನು ಪತ್ರಿಕಾ ಭವನದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತಾಡಿದ ಅವರು, “ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ನನ್ನನ್ನು ಗುರುತಿಸಿ ಹುಡುಕಿಕೊಂಡು ಬಂದು ಪತ್ರಿಕಾ ಭವನಕ್ಕೆ ಕರೆದು ಸನ್ಮಾನಿಸಿರುವುದು ಅತೀವ ಸಂತಸ ತಂದಿದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘಕ್ಕೆ ಧನ್ಯವಾದಗಳು” ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತಾಡಿದ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು, “ದಿನದ ಆಗುಹೋಗುಗಳನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪತ್ರಕರ್ತರದ್ದಾಗಿದೆ. ಸಮಾಜವನ್ನು ಕಾಲಕಾಲಕ್ಕೆ ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತ ಬಂದಿದ್ದಾರೆ. ಪತ್ರಕರ್ತರ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತ ಬಂದಿರುವ ಎಲ್ಲರಿಗೂ ಈ ದಿನದ ಶುಭಾಶಯಗಳು”ಎಂದರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮಾತನಾಡಿ, “ಆಧುನಿಕ ಕಾಲಘಟ್ಟದಲ್ಲಿ ಮಾಧ್ಯಮಗಳ ಮೂಲಸ್ವರೂಪ ಬದಲಾಗುತ್ತಿದೆ. ಸುದ್ದಿಯನ್ನು ಸೋಸದೆ ಹಾಗೇ ಹಾಕುವುದರಿಂದ ಹಾಗೂ ನವ ಮಾಧ್ಯಮಗಳ ಪ್ರಭಾವದಿಂದ ಪತ್ರಿಕೋದ್ಯಮ ಅಪಾಯದ ಅಂಚಿನಲ್ಲಿದೆ. ತಂತ್ರಜ್ಞಾನ ಬೆಳೆದಂತೆ ನವ ಮಾಧ್ಯಮಗಳು ಬರುವುದು ಸಹಜ. ಆದರೆ ಅವುಗಳು ಸಾಧ್ಯವಾದಷ್ಟು ನೈತಿಕತೆಯೊಂದಿಗೆ ಕಾರ್ಯ ನಿರ್ವಹಿಸಲಿ”ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಸಂಘದ ಸದಸ್ಯ ಭುವನೇಂದ್ರ ಪುದುವೆಟ್ಟು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಲಾಯಿತು.