January 17, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ತಾಲೂಕು 18 ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ಮಕ್ಕಳ‌ಲ್ಲಿರುವ ಪ್ರತಿಭೆಗಳನ್ನು ಗುರುತಿಸಿ‌ ಪ್ರೋತ್ಸಾಹಿಸಲು ಮಕ್ಕಳ ಸಾಹಿತ್ಯ ಸಮ್ಮೇಳನ ಪೂರಕವಾಗಿದೆ – ಕುಮಾರಿ ಪ್ರೇಕ್ಷಾ

ಬಂಟ್ವಾಳ : ಮಕ್ಕಳ‌ಲ್ಲಿರುವ ಪ್ರತಿಭೆಗಳನ್ನು ಗುರುತಿಸಿ‌ ಪ್ರೋತ್ಸಾಹಿಸಲು ಮಕ್ಕಳ ಸಾಹಿತ್ಯ ಸಮ್ಮೇಳನ ಪೂರಕವಾಗಿದೆ ಎಂದು ಬಂಟ್ವಾಳ ತಾಲೂಕು 18 ನೇ  ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶಂಭೂರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು. ಪ್ರೇಕ್ಷಾ ಹೇಳಿದರು.

ಅವರು ಮಕ್ಕಳ ಕಲಾ ಲೋಕ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನವಂಬರ್ 19ರಂದು‌ ಮಂಗಳವಾರ ನಡೆದ 18 ನೇ  ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ‌ ಜೀವನದ ಅಭಿವೃದ್ಧಿಗೆ ಪಠ್ಯದ ಜೊತೆಗೆ ಪಠ್ಯೇತರ  ಚಟುವಟಿಕೆಗಳು ಇದ್ದಾಗ ಜ್ಞಾನ ವೃದ್ಧಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಕೌಶಲ್ಯಾಭಿದ್ಧಿಯಾಗುತ್ತದೆ, ಮಕ್ಕಳು ಸಾಹಿತ್ಯದ ವಿಚಾರಧಾರೆಯನ್ನು ಆಲಿಸುವ ಮತ್ತು ಓದುವ ಹವ್ಯಾಸ ಬೆಳೆಸಬೇಕು ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾನ್ವಿ ಸುವರ್ಣ ಮಾತನಾಡಿ ಕನ್ನಡ ಎಲ್ಲರ ಮನದ ಭಾಷೆಯಾದರೆ ಮಾತ್ರ ಜನರ ಭಾಷೆ ಆಡಳಿತ ಭಾಷೆಯಾಗಿ ಉಳಿಯಬಲ್ಲದು. ಸಹಸ್ರಾರು ವರ್ಷಗಳ ಹಿರಿತನವುಳ್ಳ ಜಾನಪದ ಪರಂಪರೆಯಲ್ಲಿ ಮಕ್ಕಳ ಸಾಹಿತ್ಯದ ಬೇರುಗಳು ಅಡಕವಾಗಿದೆ. ಭವಿಷ್ಯದಲ್ಲಿ ಯಾವುದೇ ವೃತ್ತಿಯಿದ್ದರೂ ಕನ್ನಡಕ್ಕೆ ಆದ್ಯತೆ ಇರಲಿ, ಪರಿಸರದ ಎಲ್ಲಾ ಜೀವಸಂಕುಲ‌ಗಳು ಮಕ್ಕಳ‌ ಸಾಹಿತ್ಯದಲ್ಲಿ ಮೆರೆಯಲಿ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸ್ವರಚಿತ ಕೃತಿಗಳನ್ನು ಬಿಡುಗಡೆ ಗೊಳಿಸಿದ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಮಾತನಾಡಿ, ಸಮತೋಲಿತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇಂತಹ ಸಮ್ಮೇಳನ‌ ಉತ್ತಮ‌ ವೇದಿಕೆಯಾಗಿದೆ. ಮಕ್ಕಳು ಹುಟ್ಟುವ ಮೊದಲೇ ಎಲ್. ಕೆಜಿ ಮತ್ತು ಯುಕೆಜಿಗೆ ದಾಖಲಾತಿಗಾಗಿ ಕಾದಿರಿಸುವ ಅವಾಸ್ತವ ಶಿಕ್ಷಣ ಪರಂಪರೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬೆಳ್ತಂಗಡಿ ವಾಣಿ ಪಿ.ಯು. ಕಾಲೇಜಿನ ದ್ವಿತೀಯ ಪಿ.ಯು. ತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಿಭಾ ಕೆ. ಆರ್. ಮಾತನಾಡಿ ಸಾಹಿತ್ಯದ ಹವ್ಯಾಸ ನಮಗೆ ಜೀವಕಳೆಯನ್ನು ಹೆಚ್ಚಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷೆ  ಮೋಹಿನಿ, ಮಕ್ಕಳ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷ ಆನಂದ ಎ. ಶಂಭೂರು, ಶಾಲಾ ಮುಖ್ಯ ಶಿಕ್ಷಕ ಜಯರಾಮ ಡಿ. ಪಡ್ರೆ, ಸ್ವಾಗತ ಸಮಿತಿಯ ರಾಜೇಶ್ ಶಾಂತಿಲ ಮತ್ತು ಹೆನ್ರಿ ಬುಕೆಲ್ಲೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶೇಡಿಗುರಿಯಿಂದ‌ ಶಾಲೆಯ ತನಕ ಮೆರವಣಿಗೆ ನಡೆಯಿತು.‌ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಮೆರವಣಿಗೆ ಉದ್ಘಾಟಿಸಿದರು. ಸುಮಾರು ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಾದ ಕಿರು ನಾಟಕ, ಕಲಾ ರಂಗ ಸಂಗಮ, ಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು.

ಶಾಲಾಭಿವೃದ್ಧಿ ಸಮಿತಿ‌ ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ಕನ್ನಡ ಧ್ವಜಾರೋಹಣಗೈದರು. ಕನ್ನಡ‌ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣಗೈದರು. ಮಕ್ಕಳ ಕಲಾಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ನರಿಕೊಂಬು ಶಾಲೆಯ ವಿದ್ಯಾರ್ಥಿನಿ ಧೃತಿ ಸ್ವಾಗತಿಸಿ, ನಾಯಿಲ ಶಾಲಾ ವಿದ್ಯಾರ್ಥಿನಿ ಹರ್ಷಿತಾ ವಂದಿಸಿದರು. ಅಡ್ಯನಡ್ಕ ಜನತಾ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ ಕಾರ್ಯಕ್ರಮ‌ ನಿರ್ವಹಿಸಿದರು.

You may also like

News

ಕೋಟೆಕಾರು ವ್ಯವಸಾಯ ಸಹಕಾರಿ ಸೇವಾ ಸಂಘದಲ್ಲಿ ಹಾಡುಹಗಲೇ ದರೋಡೆ – ಬಂದೂಕು ತೋರಿಸಿ ನಗ-ನಗದು ಕಳವು

ಮಂಗಳೂರು: ಕೋಟೆಕಾರು ವ್ಯವಸಾಯ ಸಹಕಾರಿ ಸೇವಾ ಸಂಘದಲ್ಲಿ ಹಾಡುಹಗಲೇ ಶಸ್ತ್ರಸಜ್ಜಿತರಾಗಿ ನುಗ್ಗಿದ 5-6 ಮಂದಿ ದುಷ್ಕರ್ಮಿಗಳ ತಂಡ ಸುಮಾರು 10-12 ಕೋಟಿ ರೂ. ಮೌಲ್ಯದ ನಗ-ನಗದು ದರೋಡೆಗೈದು
News

ಸಂದೇಶ ಪ್ರತಿಷ್ಠಾನ 2025 ರ ಸಂದೇಶ ಪ್ರಶಸ್ತಿಗಳ ಪ್ರಕಟಣೆ

ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ®ವು ಮೌಲ್ಯಾಧಾರಿತ ಸಮಾಜವನ್ನು ಪೋಷಿಸುವ ದೃಢವಾದ ಬದ್ಧತೆಯಿಂದ ಹುಟ್ಟಿಕೊಂಡ ಸಂಸ್ಥೆ. 1989ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆಯು 1991 ರಲ್ಲಿ

You cannot copy content of this page