ಸಿಪಿಐಎಂ ನಿಂದ ನಗರದಲ್ಲಿ ಬೃಹತ್ ಮೆರವಣಿಗೆ – ಮೂರು ದಿನಗಳ ಸಮ್ಮೇಳನಕ್ಕೆ ತೆರೆ

ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದ ಸಮಾರೋಪದ ಪ್ರಯುಕ್ತ ಸಿಪಿಐಎಂ ಕಾರ್ಯಕರ್ತರು ಮಂಗಳೂರು ನಗರದಲ್ಲಿ ಬೃಹತ್ ರ್‍ಯಾಲಿ ನಡೆಸಿ ಗಮನ ಸೆಳೆದರು. ಕೆಂಪು ಟೊಪ್ಪಿ, ಶಾಲು, ಅಂಗಿ ಧರಿಸಿದ ಯುವಜನರು ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಮೆರವಣಿಗೆಯ ಮುಂಚೂಣಿಯಲ್ಲಿ ಸಿಪಿಐಎಂ ಪಕ್ಷದ ಸಾಂಪ್ರದಾಯಿಕ ಬ್ಯಾಂಡ್ ಸೆಟ್, ರಾಷ್ಟ್ರೀಯ, ಅಂತರಾಷ್ಟ್ರೀಯ ಕಮ್ಯೂನಿಸ್ಟ್ ನಾಯಕರ ಭಾವ ಚಿತ್ರಗಳ ವಾಹನಗಳು ಇದ್ದವು.
ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆದು, ಪುರಭವನದ ಹೊರ ಆವರಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಕೇರಳ ಸಿಪಿಐಎಂ ಪಕ್ಷದ ಯುವ ನಾಯಕ ಪ್ರಧಾನ ಭಾಷಣ ಮಾಡಿದರು. ದೇಶದಲ್ಲಿ ಇಂದು ಬಿಜೆಪಿ ಪಕ್ಷದ ದುರಾಡಳಿತ ಜನ ಸಾಮಾನ್ಯರನ್ನು ಬಸವಳಿಯುವಂತೆ ಮಾಡಿದೆ. ಬಿಜೆಪಿ ಒಂದು ಸ್ವತಂತ್ರ ರಾಜಕೀಯ ಪಕ್ಷವೇ ಅಲ್ಲ. ಅದು ಆರ್.ಎಸ್.ಎಸ್. ಇಶಾರೆಯಂತೆ ಕಾರ್ಯನಿರ್ವಹಿಸುವ ಒಂದು ಗುಂಪು. ಕಾರ್ಪೊರೇಟ್ ಬಂಡವಾಳದಾರರ ರಕ್ಷಣೆಗೆ ಬಿಜೆಪಿ ಪಕ್ಷ, ಸರಕಾರ ದುಡಿಯುತ್ತದೆ. ಧರ್ಮಾಂಧತೆ, ಫ್ಯಾಸಿಸಂ ಮೂಲಕ ಅದು ದೇಶದ ಅಸ್ಮಿತೆಯನ್ನೇ ನಾಶಪಡಿಸುತ್ತಿದೆ. ಫ್ಯಾಸಿಸಂನ ಜಾಗತಿಕ ಮುಖವಾದ ಹಿಟ್ಲರ್ ಕೊನೆಗೆ ಏನಾದ ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿ ಇದರಿಂದ ಪಾಠ ಕಲಿಯಬೇಕು. ಸರ್ವಾಧಿಕಾರ ಈ ನೆಲದಲ್ಲಿ ನಡೆಯುವುದಿಲ್ಲ ಎಂದು ಸ್ವರಾಜ್ ಹೇಳಿದರು.
ಕಾಂಗ್ರೆಸ್ ಸಹ ರಾಜಕೀಯ ಪಕ್ಷದ ಸ್ವರೂಪ ಕಳೆದು ಕೊಂಡಿದೆ. ಕುಟುಂಬಗಳ ಪಕ್ಷವಾಗಿ ಕಾರ್ಯನಿರ್ವಸುತ್ತಿದೆ. ಅದು ಕೋಮುವಾದದ ವಿರುದ್ಧ ದೃಢವಾಗಿಲ್ಲ, ಖಾಸಗಿ ಬಂಡವಾಳಶಾಹಿಗಳ ಪರವಾಗಿಯೇ ನಿಲ್ಲತ್ತಿದೆ. ಸಾಮ್ರಾಜ್ಯಶಾಹಿಗಳ ಎದುರಾಗಿ ನಿಲ್ಲುವ ದೃಢತೆಯನ್ನೂ ಅದು ತೋರುತ್ತಿಲ್ಲ. ಪ್ಯಾಲೇಸ್ತೀನ್ ಮೇಲಿನ ಇಸ್ರೇಲ್ ನ ಕ್ರೌರ್ಯ, ಆಕ್ರಮಣವನ್ನು ಪ್ರತಿಭಟಿಸಿ ಪ್ರತಿಭಟನಾ ಸಭೆಗಳನ್ನು ಆಯೋಜಿಸಲು ಕರ್ನಾಟಕದ ಕಾಂಗ್ರೆಸ್ ಸರಕಾರ ಅನುಮತಿಯನ್ನು ನೀಡುತ್ತಿಲ್ಲ. ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸಿದ ಸಿಪಿಐಎಂ ಮುಖಂಡರ ಮೇಲೆ ಮಂಗಳೂರಿನಲ್ಲಿ ಕೇಸು ದಾಖಲಿಸಲಾಗಿದೆ. ಕಾಂಗ್ರೆಸ್ ಪಕ್ಷದ ಸೋಗಲಾಡಿತನಕ್ಕೆ ಇದು ಉದಾಹರಣೆ ಎಂದು ಅವರು ಆರೋಪಿಸಿದರು. ಬದಲಾವಣೆ ಬಯಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತೆ ಸದಾ ಜನಪರವಾಗಿ ಧ್ವನಿ ಎತ್ತುವ ಸಿಪಿಐಎಂ ಪಕ್ಷವನ್ನು ಆಯ್ಕೆ ಮಾಡಬೇಕು ಎಂದು ಅವರು ವಿನಂತಿಸಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೆ. ಪ್ರಕಾಶ್ ಹಾಗೂ ಅಧ್ಯಕ್ಷತೆ ವಹಿಸಿದ ಕೆ. ಯಾದವ ಶೆಟ್ಟಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ನೂತನ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕ್ರಷ್ಣಪ್ಪ ಕೊಂಚಾಡಿ, ಬಿ.ಎಂ. ಭಟ್, ಸದಾಶಿವದಾಸ್, ಸುಕುಮಾರ್ ವಸಂತ ಆಚಾರಿ, ಜಯಂತಿ ಶೆಟ್ಟಿಯವರು ಸೇರಿದಂತೆ ನೂತನ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ವಂದಿಸಿದರು.