ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು, ಮುಂದಾಗುವ ಅನಾಹುತಗಳಿಗೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹೊಣೆ, ಹಿಂದೂ ಜಾಗರಣ ವೇದಿಕೆಯಿಂದ ಎಚ್ಚರಿಕೆ

ಬಂಟ್ವಾಳ : ಸಕಾರಣವಿಲ್ಲದೆ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರಕರಣಗಳನ್ನು ದಾಖಲಿಸಿ ಅವರ ಮನೋಸ್ಥೈರ್ಯವನ್ನು ಕುಗ್ಗಿಸುವ ಕಾರ್ಯ ಪೋಲೀಸ್ ಇಲಾಖೆಯಿಂದ ನಡೆಯುತ್ತಿದ್ದು ಈ ಕಾರ್ಯದಿಂದ ಹಿಂದಕ್ಕೆ ಸರಿಯದಿದ್ದಲ್ಲಿ ಮುಂದೆ ನಡೆಯುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆಯೇ ಹೊಣೆಯಾಗುತ್ತದೆ ಎಂದು ಹಿಂದೂ ಜಾಗರಣಾ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಸರಸಿಂಹ ಮಾಣಿ ಎಚ್ಚರಿಸಿದ್ದಾರೆ.
ಬಿ.ಸಿ. ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ – ಕೇರಳ ಗಡಿಭಾಗವಾದ ವಿಟ್ಲ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ, ಗೋಸಾಗಾಟ, ಕೆಂಪು ಕಲ್ಲಿನ ಹುಡಿ ಸಾಗಾಟ, ಡ್ರಗ್ಸ್ ದಂಧೆ, ಗಾಂಜಾ ಮಾರಾಟ ಮೊದಲಾದ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೂ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ರಾಜ್ಯದ ಕಾಂಗ್ರೆಸ್ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅನೇಕ ಧರ್ಮ ವಿರೋಧಿ, ಸಮಾಜ ವಿರೋಧಿ ಹಾಗೂ ಶಾಂತಿ ಕದಡುವ ಅನೇಕ ಕೆಲಸಗಳು ನಡೆಯುತ್ತಿದ್ದು ಅಂತವರ ಮೇಲೆ ಪ್ರಕರಣ ದಾಖಲು ಮಾಡಲು ಸಾಧ್ಯವಾಗದ ಪೋಲೀಸ್ ಇಲಾಖೆ ಹಿಂದೂ ಸಂಘಟನೆಯ ಕಾರ್ಯಕರ್ತ ಅಕ್ಷಯ ರಜಪೂತ್ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಹಿಂದೂ ಸಮಾಜಕ್ಕೆ ಕೆಲಸ ಮಾಡುವ ಕಾರ್ಯಕರ್ತರ ಮೇಲೆ ದಬ್ಬಾಳಿಕೆಯನ್ನು ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ರಕ್ಷಣೆಗಾಗಿ ಕಳೆದ 40 ವರ್ಷಗಳಿಂದ ಸಂಘಟನೆ ಸಮಾಜಮುಖಿ ಕೆಲಸ ಮಾಡುತ್ತಿದೆ. ಆದರೆ ಸಂಘಟನೆಯಲ್ಲಿ ಕ್ರೀಯಾಶೀಲರಾಗಿದ್ದುಕೊಂಡು ಸಮಾಜಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರ ಮೇಲೆ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಹಾಗೂ ಪೋಲೀಸ್ ಇಲಾಖೆ ಪ್ರಕರಣ ದಾಖಲಿಸಿ ಮನೋ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಅಕ್ಷಯ್ ರಜಪೂತ್ ಅವರಿಗೆ ನೀಡಿರುವ ನೋಟಿಸ್ ವಾಪಸು ಪಡೆಯಬೇಕು ಎಂದು ಹಿಂದು ಜಾಗರಣ ವೇದಿಕೆ ಒತ್ತಾಯ ಮಾಡುತ್ತದೆ ಎಂದರು.
ಸಂಘಟನೆಗಾಗಿ ದುಡಿಯುವ ರಜಪೂತ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಅವರು, ಇಂತಹ ಉದ್ದೇಶ ಪೂರ್ವ ಕೆಲಸಗಳಿಂದ ಆಗುವ ಸಂಘರ್ಷಕ್ಕೆ ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಮುಗಿ ಬೀಳುವ ಪೋಲೀಸರ ತಾಕತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ದೇಶದ್ರೋಹಿಗಳ ಮೇಲೆ ಯಾಕಿಲ್ಲ ಎಂದು ಪ್ರಶ್ನಿಸಿದ ಅವರು ಬಂಟ್ವಾಳ ತಹಶೀಲ್ದಾರ್ ಕಚೇರಿಯಲ್ಲಿ ಸಜ್ಜನರಿಗೆ ಗೌರವವಿಲ್ಲ, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂವರಿಗೆ ರಾಜಾತಿಥ್ಯ ದೊರಕುತ್ತದೆ ಎಂದು ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖರಾದ ರಾಜೇಶ್ ಬೊಳ್ಳುಕಲ್ಲು, ಸಮಿತ್ರಿರಾಜ್ ಧರೆಗುಡ್ಡೆ, ಪ್ರಶಾಂತ್ ಕೆಂಪುಗುಡ್ಡೆ ಹಾಗೂ ತಿರುಲೇಶ್ ಬೆಳ್ಳೂರು ಉಪಸ್ಥಿತರಿದ್ದರು.