September 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಿದ್ಧಕಟ್ಟೆ ನವಂಬರ್ 23ರಂದು ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಭರದ ಸಿದ್ಧತೆ

ಬಂಟ್ವಾಳ: ತಾಲೂಕಿನ ಎಲಿಯ ನಡುಗೋಡು ಗ್ರಾಮ, ಸಿದ್ಧಕಟ್ಟೆ ಸಮೀಪದ ಕೊಡಂಗೆಯಲ್ಲಿ ಕಳೆದ ವರ್ಷ ನೂತನವಾಗಿ ನಿರ್ಮಾಣಗೊಂಡ ವೀರ-ವಿಕ್ರಮ ಜೋಡುಕರೆಯಲ್ಲಿ ಇದೇ ಬರುವ ನವಂಬರ್ 23ರಂದು ಶನಿವಾರ 2ನೇ ವರ್ಷದ ವೀರ ವಿಕ್ರಮ ಜೋಡು ಕರೆ  ಕಂಬಳ ಕೂಟ ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಪೊಡುಂಬ ಸಂದೀಪ್ ಶೆಟ್ಟಿ ತಿಳಿಸಿದರು.

  ಬಿ.ಸಿ. ರೋಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಬಳ ಸಮಿತಿ ಗೌರವಾಧ್ಯಕ್ಷ ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಂಬಳ ಕೂಟದಲ್ಲಿ ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಅಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯರ ಅಧ್ಯಕ್ಷತೆಯಲ್ಲಿ, ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ  ಕಂಬಳವನ್ನು ಉದ್ಘಾಟಿಸುವರು. ಕುಡುಂಬೂರು ಗುತ್ತು ಕ್ಷೇತ್ರದ ಮೊಕ್ತೇಸರ ಗುತ್ತಿನಾರ್ ಜಯರಾಮ ಶೆಟ್ಟಿ, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ಟಿಸ್, ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ಧಕಟ್ಟೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಹಿರಿಯ ವೈದ್ಯ ಡಾ. ಪ್ರಭಾಚಂದ್ರ ಜೈನ್,  ಡಾ. ಸುದೀಪ್ ಕುಮಾರ್ ಜೈನ್, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್  ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.

    ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ಸನ್ಮಾನ್ಯ ಯು. ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಆರ್.ಎಸ್.ಎಸ್. ಮುಖಂಡ ಡಾ.ಕೆ. ಪ್ರಭಾಕರ ಭಟ್ ಕಲ್ಲಡ್ಕ, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಎಸ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಹಿತ ಅವಿಭಜಿತ ಜಿಲ್ಲೆಯ ಎಲ್ಲಾ ಶಾಸಕರು ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

   ಇಲ್ಲಿನ ಸುಸಜ್ಜಿತ ಹೊಸ ಜೋಡುಕರೆಯಲ್ಲಿ ಇದೇ ಪ್ರಥಮ ಬಾರಿಗೆ ಒಂದು ವರ್ಷದೊಳಗೆ 3ನೇ ಕಂಬಳ ನಡೆಯುತ್ತಿದೆ. ಕಳೆದ ಮಾರ್ಚ್ 16ರಂದು ಪ್ರಥಮ ಕಂಬಳ ಮತ್ತು ಅಗಸ್ಟ್ 19ರಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ಕೂಟ ನಡೆದಿದ್ದು, ಇದೀಗ ನವಂಬರ್ 23ರಂದು ಮತ್ತೆ 2ನೇ ವರ್ಷದ ಕಂಬಳ ನಡೆಯುತ್ತಿದೆ.

ಪ್ರಥಮ ಕಂಬಳದಲ್ಲಿ ಒಟ್ಟು 99 ಜೋಡಿ, ರೋಟರಿ ಆಯೋಜಿಸಿದ ಕಂಬಳದಲ್ಲಿ ಸಬ್ ಜ್ಯೂನಿಯರ್ ವಿಭಾಗದ ಒಟ್ಟು 85 ಜೋಡಿ ಕೋಣಗಳು ಭಾಗವಹಿಸಿದ್ದು, ಈ ಬಾರಿ 200 ಕ್ಕೂ ಮಿಕ್ಕಿ ಜೋಡಿ ಭಾಗವಹಿಸುವ ನಿರೀಕ್ಷೆ ಇದೆ. ವರ್ಷವಿಡೀ ಕುದಿ ಕಂಬಳ (Practice) ನಡೆಯುತ್ತಿದ್ದು, ಈ ಬಾರಿ ವಾಹನ ನಿಲುಗಡೆಗೆ ಪ್ರತ್ಯೇಕ 4 ಎಕರೆ ಜಮೀನು ಮತ್ತು ಕೋಣಗಳ ವಿಶ್ರಾಂತಿಗೆ ಮೂರೂವರೆ ಎಕರೆ ಜಮೀನು ಸಮತಟ್ಟು ಗೊಳಿಸಲಾಗಿದೆ. ಮಳೆಗಾಲದಲ್ಲಿ ಗುಡ್ಡದ ನೀರು ಕಂಬಳ ಕರೆಗೆ ಹರಿದು ಬಾರದಂತೆ ಸಿಮೆಂಟ್ ಪೈಪ್ ಅಳವಡಿಸಲಾಗಿದ್ದು, ಬೇಸಿಗೆಯಲ್ಲಿ ಕೂಡಾ ಕಂಬಳ ಕರೆಗೆ ನಿರಂತರ ನೀರಿನ ಸಂಪರ್ಕ ಅಳವಡಿಸಲಾಗಿದೆ.

ಕಂಬಳ ಕರೆ ಸುತ್ತಲೂ ಇರುವ ಪ್ರಕೃತಿದತ್ತ ಮರ ಗಿಡಗಳ ನೆರಳು ಓಟದ ಕೋಣಗಳಿಗೆ ಅನುಕೂಲಕರವಾಗಿದೆ ಎಂದು ವಿವರಿಸಿದ ಅವರು ಈ ಬಾರಿ ಸಂಗೀತ ನಿರ್ದೇಶಕ ಗುರುಕಿರಣ್ ಸಹಿತ ಚಿತ್ರನಟರಾದ ಜಗ್ಗೇಶ್, ವಿಜಯ ರಾಘವೇಂದ್ರ, ರಾಜ್ ಬಿ. ಶೆಟ್ಟಿ, ಭೋಜರಾಜ ವಾಮಂಜೂರು, ನಿರೀಕ್ಷಾ ಶೆಟ್ಟಿ ಮತ್ತಿತರ ನಟ ನಟಿಯರು ಭಾಗವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಕುಂಬಳೆ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಗೌರವ ಸಲಹೆಗಾರ  ವಸಂತ ಶೆಟ್ಟಿ ಕೇದಗೆ, ಕಿರಣ್ ಕುಮಾರ್ ಮಂಜಿಲ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ ಉಪಸ್ಥಿತರಿದ್ದರು.

You may also like

News

₹29 Lakh Donation to Father Muller for Paediatric Cancer Care Through ‘Symphony of Hope’

Music, compassion and community come together to support children battling cancer In a remarkable initiative that brought together music, compassion
News

ಧನಂಜಯ ವರ್ಮ ಧ್ವನಿಯಲ್ಲಿ ಗುರು ರಾಯರ ಭಕ್ತಿಯ ರಸದಾರೆ ‘ಗುರು ರಾಯರುಲ್ಲೆರ್’ ನೂತನ ಭಕ್ತಿಗೀತೆ ಬಿಡುಗಡೆ

ಮಂಗಳೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ, ಶರಣಾಗತಿ ಹಾಗೂ ಅಚಲ ನಂಬಿಕೆಯನ್ನು ಸಾರುವ ‘ಗುರು ರಾಯರುಲ್ಲೆರ್’ ಎಂಬ ನೂತನ ಭಕ್ತಿಗೀತೆ ಧನಂಜಯ ವರ್ಮ ಅವರ

You cannot copy content of this page