March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ನಲ್ಲಿ ‘RUBYCON 2024’ – 27ನೇ  ವಾರ್ಷಿಕ  ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ

ಭವ್ಯ ಸಮ್ಮೇಳನಕ್ಕೆ ದೇಶದ ವಿವಿಧ ಭಾಗಗಳಿಂದ ಸುಮಾರು 1000 ಪ್ರತಿನಿಧಿಗಳು ಸಾಕ್ಷಿಯಾದರು

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 27ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘RUBYCON 2024’ ಇದರ  ಉದ್ಘಾಟನಾ ಸಮಾರಂಭವು ನವೆಂಬರ್ 21ರಂದು ಬೆಳಿಗ್ಗೆ 9:30ಕ್ಕೆ  ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರಕಾರದ ಸ್ವಾಸ್ಥ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ ದಿನೇಶ್ ಗುಂಡೂರಾವ್ ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಅನಿಲ್ ಖುರಾನಾ,  ರಾಷ್ಟ್ರೀಯ ಹೋಮಿಯೋಪಥಿ ಆಯೋಗ, ನವದೆಹಲಿ ಇದರ ಅಧ್ಯಕ್ಷರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಕಂಕನಾಡಿ, ಮಂಗಳೂರು ಇದರ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವು ದೇವರ ಆಶೀರ್ವಾದವನ್ನು ಕೋರುವುದರೊಂದಿಗೆ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಸಂಘಟನಾ ಕಾರ್ಯದರ್ಶಿ ಡಾ. ರಂಜನ್ ಸಿ. ಬ್ರಿಟ್ಟೊ ಗಣ್ಯರನ್ನು ವೇದಿಕೆಗೆ ಕರೆದೊಯ್ದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿಯೋಜಿತ ನಿರ್ದೇಶಕರು ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ಫಾದರ್ ಫಾವುಸ್ತಿನ್ ಎಲ್. ಲೋಬೊ ಇವರು ಸಭೆಯನ್ನು ಸ್ವಾಗತಿಸಿದರು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಸಾಂಕೇತಿಕವಾಗಿ  ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ಮಾನ್ಯ ದಿನೇಶ್ ಗುಂಡೂರಾವ್ ರವರು ಕಾಲೇಜಿನ ವಾರ್ಷಿಕ ಮ್ಯಾಗಜಿನ್ ‘ಪಯೋನಿಯರ್ 2024’ ಮತ್ತು ‘ರಿಸರ್ಚ್ ಬುಲೆಟಿನ್ 2024’ನ್ನು ಬಿಡುಗಡೆಗೊಳಿಸಿದರು.  ‘ಪಯೋನಿಯರ್ 2024’ ಇದರ ಸ್ಟಾಫ್ ಎಡಿಟರ್ ಡಾ. ಜೆಸಿಂತಾ ಮೊಂತೇರೊ ಮತ್ತು ರಿಸರ್ಚ್  ಸೈಂಟಿಫಿಕ್ ಕಮಿಟಿಯ ಸಂಯೋಜಕರಾದ ಡಾ. ಕೆ. ಜಾನ್ ಪಾಲ್ ಇವರು ಬಿಡುಗಡೆ ಸಮಾರಂಭದಲ್ಲಿ ಗಣ್ಯರೊಂದಿಗೆ ಜೊತೆಗೂಡಿದರು.  ಮುಖ್ಯ ಅತಿಥಿಗಳು  ತಮ್ಮ ಉದ್ಘಾಟನಾ ಭಾಷಣದಲ್ಲಿ ‘ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಒಂದು ಪರ್ಯಾಯ ವ್ಯವಸ್ಥೆಯಾಗಿರುವುದರಿಂದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿದೆ.  ಪ್ರತಿಯೊಂದು ಕ್ಷೇತ್ರವೂ ಬೆಳೆಯುತ್ತಲೇ ಇರಬೇಕು ಮತ್ತು ವಿಕಸನಗೊಳ್ಳುತ್ತಿರಬೇಕು. ಆದ್ದರಿಂದ ಕಲಿಕಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಅಧ್ಯಯನಗಳನ್ನು ಮಾಡುವುದು ಅವಶ್ಯಕ, ಇದರಿಂದ ಸಮುದಾಯಕ್ಕೆ ಸಹಾಯ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಗೌರವಾನ್ವಿತ ಅತಿಥಿಗಳಾದ ಡಾ. ಅನಿಲ್ ಖುರಾನಾ ಇವರು ತಮ್ಮ ಸಂದೇಶದಲ್ಲಿ ಭಾರತದಲ್ಲಿ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯ ಪ್ರಾಮುಖ್ಯತೆಯನ್ನು ಪ್ರಶಂಸಿಸಿದರು.  ಜಾಗತಿಕ 60,000ಕ್ಕೂ ಹೆಚ್ಚು ನೋಂದಾಯಿತ ವೈದ್ಯರೊಂದಿಗೆ ಅತೀ ದೊಡ್ಡ ಮೂಲ ಸೌಕರ್ಯಗಳನ್ನೊಳಗೊಂಡ ಹೋಮಿಯೋಪಥಿ ಕೋರ್ಸ್ ಪಠ್ಯಕ್ರಮವು ಇತರ ವೈದ್ಯಕೀಯ ವ್ಯವಸ್ಥೆಗಳಿಗೆ ಸಮನಾಗಿರುತ್ತದೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ  ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಮಹತ್ತರ ಕೊಡುಗೆಯನ್ನು ನೀಡಿದೆ’ ಎಂದು ಹೆಮ್ಮೆಯಿಂದ ನುಡಿದರು.  ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜು ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿಯತ್ತ ಮುನ್ನಡೆಯುತ್ತಿದ್ದು ಇದನ್ನು ಮುಂದುವರಿಸುವಲ್ಲಿ ಸಂಸ್ಥೆಯ ಸಮರ್ಪಣೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷರುಗಳಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕೃತಜ್ಞತೆ ಮತ್ತು ಸದ್ಬಾವನೆಯ ಸಂಕೇತವಾಗಿ ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವೈದ್ಯಕೀಯ ಮೌಲಮಾಪನ ಮತ್ತು ಹೋಮಿಯೋಪಥಿಯ ರೇಟಿಂಗ್ ಬೋರ್ಡ್, NCH ಘೋಷಿಸಿದ A+ ರೇಟಿಂಗ್ ಅನ್ನು ಸಾಧಿಸಿದ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಆಕಾಂಕ್ಷಿ ವಿಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಹೋಮಿಯೋಪಥಿ ಕೌನ್ಸಿಲ್ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ರವರು ವಂದನಾರ್ಪಣೆ ಮಾಡಿದರು.   ರಾಷ್ಟ್ರ ಗೀತೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯವಾಯಿತು.

ಡಾ. ದೀಪಾ ಪಾಯಸ್ ಮತ್ತು ಡಾ. ಮನೀಶ್ ಕುಮಾರ್ ತಿವಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸೂಟಿಕಲ್ ಡಿವಿಜನ್‌ನ ಆಡಳಿತಾಧಿಕಾರಿ ವಂದನೀಯ ನೆಲ್ಸನ್ ಡಿ. ಪಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳಾದ ವಂದನೀಯ ಫಾದರ್ ಅಶ್ವಿನ್ ಎಲ್. ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿಸೋಜ, ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಮತ್ತು ಹೋಮಿಯೋಪಥಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ರಂಜನ್ ಸಿ. ಬ್ರಿಟ್ಟೊ ಇವರೆಲ್ಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

2 ದಿನಗಳ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದಲ್ಲಿ ಮುಂಬೈನ ಪ್ರೆಡಿಕ್ಟಿವ್ ಹೋಮಿಯೋಪಥಿ ಇದರ ಆಡಳಿತ ನಿರ್ದೇಶಕರಾದ ಡಾ. ಅಂಬರಿಶ್ ವಿಜಯಕರ್ ಇವರು ‘ಪಾತ್ ಫೈಂಡರ್ ಟು ಸಿಮಿಲಿಮಮ್’ ಎಂಬ ವಿಷಯದೊಂದಿಗೆ ಮುಖ್ಯ ಭಾಷಣಕಾರರಾಗಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮನೋವೈದ್ಯ ಶಾಸ್ತ್ರ ವಿಭಾಗದ  ಮುಖ್ಯಸ್ಥರು ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ ಕಲ್ಕತ್ತಾ ಇದರ ಪೆಥಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಕುಮಾರವೆಲ್ ವಿ. ಇವರುಗಳು ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಈ ಭವ್ಯ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 1000 ಪ್ರತಿನಿಧಿಗಳು ಭಾಗವಹಿಸಿದ್ದರು.

 

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page