ಯಶಸ್ಸಿನ ನಗೆ ಬೀರಿದ ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ
ಮಕ್ಕಳ ಕಲಾ ಲೋಕವು ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಯೋಗದಲ್ಲಿ ಜರಗಿಸಿದ 17ನೇ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಆ ಸಮ್ಮೇಳನದ ಮಹಾ ಯಶಸ್ಸಿನ ನೆನಪುಗಳು ಮಾಸುವ ಮುನ್ನವೇ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಯೋಗದಲ್ಲಿ 18ನೇ ಸಾಹಿತ್ಯ ಸಮ್ಮೇಳನವನ್ನು ನವಂಬರ್ 19ರಂದು ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಿ ಮತ್ತೊಮ್ಮೆ ಯಶಸ್ಸಿನ ನಗೆ ಬೀರಿರುವುದು ಸಾಹಿತ್ಯ ಮತ್ತು ಕಲಾ ವಲಯಕ್ಕೆ ಸಂತಸದಾಯಕವಾಗಿದೆ. ಕಾರ್ಯಕ್ರಮಗಳಲ್ಲಿ ಸಮಯ ಪ್ರಜ್ಜೆ, ಶಿಸ್ತು ಹಾಗೂ ಸಂಯಮ ಹೇಗಿರ ಬೇಕೆಂಬುದನ್ನು ಸಮಾಜಕ್ಕೆ ಮಕ್ಕಳ ಮೂಲಕ ಮಾದರಿಯಾಗಿ ತೋರಿಸಿರುವುದು ಮಕ್ಕಳ ಕಲಾಲೋಕದ ದೊಡ್ಡ ಸಾಧನೆ.
ಪೂರ್ವಾಹ್ನ 9.05ಕ್ಕೆ ಮೆರವಣಿಗೆ: ಸಮಯಕ್ಕೆ ಸರಿಯಾಗಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಮೆರವಣಿಗೆಗೆ ಚಾಲನೆ ಕೊಟ್ಟೇ ಬಿಟ್ಟರು. ಸಮ್ಮೇಳನದ ಸ್ವಾಗತ ಸಮಿತಿ, ಮಕ್ಕಳ ಕಲಾಲೋಕ ಮತ್ತು ಪಾಲಕರು ಹಾಗೂ ಐನ್ನೂರಕ್ಕೂ ಅಧಿಕ ಮಕ್ಕಳು, ವಿವಿಧ ಶಾಲೆಗಳ ಬ್ಯಾಂಡ್ ಸೆಟ್, ಶಂಭೂರು ಶಾಲೆಯ ಹುಲಿವೇಷಧಾರಿ ಬಾಲಕರು, ಬೊಂಬೆಗಳ ಮುಖವಾಡ ಧಾರಿಗಳು, ಛತ್ರಿ ಮತ್ತು ಕನ್ನಡ ಪತಾಕೆಗಳನ್ನು ಬೀಸುತ್ತಾ ಜಯ ಘೋಷ ಹಾಕುತ್ತಾ ಸಾಗಿದ ಭವ್ಯ ಮೆರವಣಿಗೆಯ ದೃಶ್ಯ ನಯನ ಮನೋಹರವಾಗಿತ್ತು. ಮೆರವಣಿಗೆಯು ಸಮ್ಮೇಳನಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಮರವಣಿಗೆಯಲ್ಲಿದ್ದರವರು ಧ್ವಜಾಜರೋಹಣಕ್ಕೆ ಸಾಲಾಗಿ ಅಣಿಯಾದರು. ಕ್ಲಪ್ತ ಸಮಯದಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ಕನ್ನಡ ಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಜಜಾರೋಹಣ ಗೈದರು. ಎಲ್ಲವೂ ನಿರ್ಧಾರಿತ ಸಮಯದಲ್ಲಿ ಅಚ್ಚುಕಟ್ಟುತನದಿಂದ ನಡೆದಿರುವುದು ಪ್ರಶಂಸನೀಯ.
ಶಂಭೂರು ಶಾಲಾ ವಿದ್ಯಾರ್ಥಿಗಳ ಹುಲಿವೇಷದ ಕುಣಿತ ಮೆರವಣಿಗೆಯುದ್ದಕ್ಕೂ ಸಾಗಿ ಸಮ್ಮೇಳನದ ವೇದಿಕೆಯಲ್ಲಿಯೂ ಪ್ರದರ್ಶನಗೊಂಡು ನೋಡುಗರ ಮನರಂಜಿಸಿತು. ಉದ್ಘಾಟನೆಯು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭ ಮತ್ತು ಮುಕ್ತಾಯ ಕಂಡಿತು. ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ಅವರ ಸಾದರ್ಭಿಕ ಪ್ರಸ್ತಾವನೆ, ಮಕ್ಕಳ ಸ್ವರಚನೆಯ ಕೃತಿಗಳನ್ನು ಬಿಡುಗಡೆ ಮಾಡಿದ ಚೂಂತಾರು ರಾಮಕೃಷ್ಣ ಭಟ್ಟರ ವಿಚಾರ ಪ್ರದ ಮಾತುಗಳು ಸಮಯೋಚತವಾಗಿದ್ದುವು. ವಿವಿಧ ನಿರ್ವಹಣೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಭಾಷಾ ಪ್ರೌಢಿಮೆ, ಸಭಾಂಗಣದೊಳಗೆಯೇ ಮಕ್ಕಳಿಂದಾದ ಸ್ವರಚನೆ ಮತ್ತು ಮಾತುಕತೆಯಲ್ಲಿ ತೊಡಗಿಸಿದವರಿಂದ ಆಯ್ಕೆಯಾದ ಮಕ್ಕಳು ನಡೆಸಿದ ಸಾಹಿತ್ಯ ಗೋಷ್ಟಿಯು ಮಕ್ಕಳ ಸಾಹಿತ್ಯಿಕ ಮತ್ತು ಭಾಷಾ ಪ್ರಭುತ್ವವನ್ನು ಅನವಾರಣಗೊಳಿಸಿತು. ಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಯ ಅಧ್ಯಕ್ಷೆ ವೈಷ್ಣವಿ ಕಡ್ಯ ಮತ್ತು ಶಹಝಾ ಫಾತಿಮಾ ರವರ ಭಾಷಣ ಅತ್ಯಂತ ಸಮಯೋಚಿತವಾಗಿತ್ತು. ಸಮ್ಮೇಳನದ ಸರ್ವಾಧ್ಯಕ್ಷೆ ಪ್ರೇಕ್ಷಾ, ಉದ್ಘಾಟಕರಾದ ಸಾನ್ವಿ ಸುವರ್ಣ ಮತ್ತು ಮುಖ್ಯ ಅತಿಥಿ ವಿಭಾ ಕೆ. ಆರ್. ಅವರ ಮಾತುಗಳು ಮಾರ್ಮಿಕ ಮತ್ತು ಅರ್ಥವತ್ತಾಗಿ ಮೂಡಿ ಬಂದು ಸಮ್ಮೇಳನದ ಮೆರುಗನ್ನು ಹೆಚ್ಚಿಸಿತು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ ನಾಯ್ಕ್ ಉಳಿಪ್ಪಾಡಿಗುತ್ತು ತನ್ನ ಮಾತುಗಳನ್ನು ಶುಭಾಶಯಕ್ಕೆ ಸೀಮಿತಗೊಳಿಸಿ ಮಕ್ಕಳ ಹಾಗೂ ಸಾರ್ವಜನಿಕರ ಮನ್ನಣೆಗೆ ಪಾತ್ರರಾದರು.
ಸಮಾರೋಪವೂ ಅಪರಾಹ್ನ ಘಂಟೆ 3:00ಕ್ಕೆ ಆರಂಭಗೊಂಡು ನಾಲ್ಕು ಗಂಟೆಯಾಗುತ್ತಿದ್ದಂತೆ ಧನ್ಯವಾದವೂ ಮುಗಿದಿರುವುದು ಸಂಘಟನಾ ಚಾತುರ್ಯದ ಪ್ರತಿಬಿಂಬವಾಗಿತ್ತು. ಓಜಾಲ ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿ ಪ್ರದಾನ, ಸಂಪನ್ಮೂಲ ಶಿಕ್ಷಕಿ ಸುಧಾ ನಾಗೇಶ್ ಅವರಿಗೆ ಬಾಲಬಂಧು ಪುರಸ್ಕಾರ ಪ್ರದಾನ ಇವೂ ಭಾವಪೂರ್ನವಾಗಿ ನಡೆದುವು. ಮಕ್ಕಳ ಸಾಹಿತ್ಯ ಸಮ್ಮೇಳನದ ನೈಜ ಅನುಭವಗಳನ್ನು ಮುಕ್ತವಾಗಿ ಸಂತಸದಿಂದ ತೆರೆದಿಡುವುದರ ಮೂಲಕ ಬಾಲವಿಕಾಸ ಶಾಲೆಯ ವಿದ್ಯಾರ್ಥಿನಿ ಹನ್ಸಿಕಾ ಡಿ. ಪೂಜಾರಿ ಸಮಾರೋಪ ಭಾಷಣಕ್ಕೆ ಸುಂದರ ರೂಪ ನೀಡಿದರು. ಸಮ್ಮೇಳನದ ವೇದಿಕೆಯು ಒಂದೆಡೆ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದಂತೆ ಬಂದವರಿಗೆ ಆಥಿಥ್ಯ, ಉಪಾಹಾರ, ಬೋಜನ, ಪಾನೀಯಗಳ ವ್ಯವಸ್ಥೆಯೂ ಲೋಪರಹಿತವಾಗಿ ಸಾಗುತ್ತಲೇ ಇತ್ತು. ಆತಿಥ್ಯದ ಸುವ್ಯವಸ್ಥೆಯ ಹಿಂದೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ಅವರ ತೊಡಗಿಸುವಿಕೆ ಮತ್ತು ಮಾರ್ಗದರ್ಶನಗಳು ಪರಿಣಾಮಕಾರಿಯಾದುವು. ಶಾಲಾ ಮುಖ್ಯ ಶಿಕ್ಷಕ ಜಯರಾಮ ಪಡ್ರೆ, ಹಿಂದಿನ ಮತ್ತು ಈಗಿನ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಶಿಕ್ಷಕರು, ಸ್ವಯಂ ಸೇವಕರು, ಸಂಘ ಸಂಸ್ಥೆಗಳ ತೊಡಗಿಸುವಿಕೆ ಉತ್ಕೃಷ್ಟವಾಗಿತ್ತು. ಹೇಮಚಂದ್ರರಿಗೆ ಒದಗಿ ಬಂದಿರುವ ಎಲ್ಲ ಸಹಕಾರಗಳು ಅವರ ವ್ಯಕ್ತಿತ್ವದ ಕನ್ನಡಿ.
ಸಮ್ಮೇಳನಗಳನ್ನು ಸಂಘಟಿಸಿ ಅಪಾರ ಅನುಭವವಿರುವ ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ಇವರಿಗೆ ಬಂಟ್ವಾಳ ತಾಲೂಕಿನ ಶಿಕ್ಷಕರ ಅಭಿಮಾನದ ಬೆಂಬಲ ವ್ಯಾಪಕವಾಗಿ ಕೂಡಿ ಬಂದಿದೆಯೆಂಬುದನ್ನು ಸಮ್ಮೇಳನ ಮತ್ತೊಮ್ಮೆ ಖಾತ್ರಿಪಡಿಸಿತು. ಹಿರಿಯ ಶಿಕ್ಷಕ ಭಾಸ್ಕರ ಅಡ್ವಳ ಸೇರಿದಂತೆ ಮಕ್ಕಳ ಕಲಾಲೋಕದ ಪ್ರತಿಯೊಬ್ಬರ ಪರಿಶ್ರಮ, ರಮೇಶ ಎಂ. ಬಾಯಾರರ ಯೋಜನಾ ಬದ್ಧ ಪೂರ್ವಸಿದ್ಧತೆಗಳು ಸಮ್ಮೇಳನದ ಯಶಸ್ಸಿನಲ್ಲಿ ಗೋಚರಿಸಿವೆ.
ಸಮ್ಮೇಳನದಲ್ಲಿ ಬಂಟ್ವಾಳ ತಾಲೂಕಿನ ಎಪ್ಪತ್ತನಾಲ್ಕು ಶಿಕ್ಷಣ ಸಂಸ್ಥೆಗಳಿಂದ 560 ವಿದ್ಯಾರ್ಥಿಗಳು, ಬಿ.ಆರ್.ಪಿ., ಸಿ.ಆರ್.ಪಿ.ಗಳು ಹಾಗೂ ಶಿಕ್ಷಕರು ಸೇರಿದಂತೆ ನೂರೈದು ಮಂದಿ ನೊಂದಣಿಯಾಗಿರುವುದು ಗಮನೀಯ. ಶಂಭೂರು ಪ್ರದೇಶದ ಪಾಲಕರು ಮತ್ತು ಗಣ್ಯರು ಹಾಗೂ ವಿವಿಧ ಶಾಲಾ ಮಕ್ಕಳ ಪೋಷಕರೂ ಸೇರಿದಂತೆ 1600ಕ್ಕೂ ಅಧಿಕ ಜನರು ಭಾಗವಹಿಸಿದರು. ಮಾತುಕತೆ, ಸಾಹಿತ್ಯ ರಚನೆಗಳಲ್ಲಿ 250ಕ್ಕೂ ಅಧಿಕ ಮಕ್ಕಳು ತೊಡಗಿಸಿದ್ದು ವೇದಿಕೆಯ ಗೋಷ್ಠಿಗೆ ಎರಡೂ ವಿಭಾಗದಿಂದ ಮೂವತ್ತು ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಗೆ ಪ್ರಾಥಮಿಕ ವಿಭಾಗ, ಉನ್ನತ ಪ್ರಾಥಮಿಕ ವಿಭಾಗ, ಪ್ರೌಢ ವಿಭಾಗ ಮತ್ತು ಪದವಿ ಪೂರ್ವ ವಿಭಾಗವೆಂದು ವರ್ಗೀಕರಿಸಿರುವುದು ಪ್ರತೀ ವಿಭಾಗಕ್ಕೂ ಸಮಾನ ಅವಕಾಶಗಳನ್ನು ನೀಡಿರುವುದು ಜನರ ಪ್ರಶಂಸೆಯನ್ನು ಗಳಿಸಿತು. ಕಲಾರಂಗ ಸಂಗಮದಲ್ಲಿ ಏಳು ಶಾಲೆಗಳು, ಕಿರು ನಾಟಕದಲ್ಲಿ ಆರು ಶಾಲೆಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿವೆ. ವೇದಿಕೆಯ ಮುಂಭಾಗದಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೌರವ ಪಡೆದ ತುಕಾರಾಮ ಪೂಜಾರಿ, ಗಣ್ಯರಾದ ಪುಳಿಂಚ ಶ್ರೀಧರ ಶೆಟ್ಟಿ, ರವೀಂದ್ರ ಕುಕ್ಕಾಜೆ, ನಿವೃತ್ತ ಶಿಕ್ಷಕಿ ನೀಲಮ್ಮ, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನೇಕರು, ತಾಲೂಕಿನ ಪತ್ರಕರ್ತರು ಸಭಾಂಗಣದ ಶೋಭೆಯನ್ನು ವರ್ಧಿಸಿದರು.
ರಮೇಶ ಎಂ. ಬಾಯಾರು ಮತ್ತು ಹೇಮಚಂದ್ರ ಭಂಡಾರದ ಮನೆ ಶಂಭೂರು ಇವರಿಬ್ಬರಲ್ಲೂ ಮಾತನಾಡಿಸಿದಾಗ, ಅವರು ಹೇಳಿರುವುದು ಹೀಗೆ: “ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಆನಂದ ಎ. ಶಂಭೂರು, ಮುಖ್ಯೋಪಾಧ್ಯಾಯ ಜಯರಾಮ ಪಡ್ರೆ, ಶಾಲಾ ಶಿಕ್ಷಕರು ಮತ್ತು ಊರವರು, ಸ್ವಾಗತ ಸಮಿತಿ ಹಾಗೂ ಉಪಸಮಿತಿಗಳು, ತಾಲೂಕಿನ ಶಿಕ್ಷಕರು, ಗಣ್ಯರು, ಪಾಲಕರೆಲ್ಲರ ನೆರವಿನೊಂದಿಗೆ ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಯಸಸ್ಸು ಕಂಡಿದೆ. ಈ ಯಶಸ್ಸು ಸಾಮೂಹಿಕ ನಾಯಕತ್ವ ಮತ್ತು ಒಗ್ಗಟ್ಟು ಮತ್ತು ಏಕತಾನತೆಯ ಚಿಂತನೆಗೆ ಸಂದ ಗೌರವ ಎಂದರು.