January 16, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನವಂಬರ್ 24 – 25ರಂದು ಬಂಟ್ವಾಳದಲ್ಲಿ ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ

ಬಂಟ್ವಾಳ : ಕರ್ನಾಟಕದಲ್ಲಿ ಹಲವು ದಶಕಗಳಿಂದಲೂ ಕಾರ್ಮಿಕರೊಡಗೂಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಶ್ರಮ ಜೀವಿಗಳ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿರುವ ಎಐಸಿಸಿಟಿಯು ತನ್ನ ಮೊದಲನೇ ರಾಜ್ಯ ಸಮ್ಮೇಳನವನ್ನು ನವಂಬರ್ 24 – 25ರಂದು ಬಂಟ್ವಾಳ ತಾಲೂಕು ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನವು ನವೆಂಬರ್ 24ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿ.ಸಿ. ರೋಡ್ ಕೈಕಂಬದಿಂದ ಶ್ರಮಜೀವಿಗಳ ಅಧಿಕಾರದತ್ತ ಜಾಥಾದಿಂದ ಆರಂಭಗೊಳ್ಳಲಿದ್ದು ಡಾ। ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ: ಮುಂದಿನ ದಾರಿ” ಬಹಿರಂಗ ಸಭೆ ನಡೆಯಲಿದೆ. ಪ್ರತಿನಿಧಿ ಅಧಿವೇಶನವು ನವಂಬರ್ 24 ಮತ್ತು 25ರಂದು ನಡೆಯಲಿದೆ.

ಈ ಸಮ್ಮೇಳನದಲ್ಲಿ ಎಐಸಿಸಿಟಿಯು ರಾಷ್ಟೀಯ ಕಾರ್ಯದರ್ಶಿ ಕಾಮ್ರೇಡ್ ರಾಜೀವ್ ದಿಮ್ರಿ, ರಾಷ್ಟ್ರೀಯ ಅಧ್ಯಕ್ಷ ಕಾಮ್ರೇಡ್ ಶಂಕರ್ ಹಾಗೂ ರಾಜ್ಯದ ಮುಖಂಡರು ಭಾಗವಹಿಸಲಿದ್ದಾರೆ. ಜಾಥಾ ಮತ್ತು ಬಹಿರಂಗ ಸಭೆಗಳಲ್ಲಿ ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ, ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಎಐಸಿಸಿಯು ನ ಸದಸ್ಯರಾದ ಪೌರಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆ ಕಾರ್ಮಿಕರು, ಬಿಸಿ ಊಟ ಕಾರ್ಮಿಕರು, ಆಟೋ ಚಾಲಕರು, ಬೀಡಿ ಕಾರ್ಮಿಕರು, ಎನ್.ಎ.ಎಲ್., ಡಿ.ಆರ್.ಡಿ.ಒ., ಐಟಿಐ ನಂತಹ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ನೆಪಮಾತ್ರ ಗುತ್ತಿಗೆ ಪದ್ಧತಿ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು, ಹಾಗೂ ವಿವಿಧ ರಂಗದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎಂದು   ಎಐಸಿಸಿಟಿಯು ದಕ್ಷಿಣ ಕನ್ನಡಾ ಜಿಲ್ಲಾ ಅಧ್ಯಕ್ಷ ಕಾಮ್ರೇಡ್ ರಾಮಣ್ಣ ವಿಟ್ಲ, ಕಾರ್ಯದರ್ಶಿ ಕಾಮ್ರೇಡ್ ಕೆ.ಇ. ಮೋಹನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಮ್ಮೇಳನವು ದೇಶದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ಪರಿಚಯಿಸಿದ ನಂತರ, ಕಾರ್ಮಿಕ ವರ್ಗವು ನವ ಉದಾರೀಕರಣ ನೀತಿಗಳ ದಾಳಿಯಿಂದ ಚೇತರಿಸಿಕೊಳ್ಳದೇ ಇರುವ ಇಂದಿನ ಪರಿಸ್ಥಿತಿಯಲ್ಲಿ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಕಾರ್ಮಿಕ ವರ್ಗದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿ ಇಡೀ ಕಾರ್ಮಿಕ ವರ್ಗವನ್ನೆ ಅಸಂಘಟಿತ ವಲಯಕ್ಕೆ ತಲ್ಲುತ್ತಿರುವ ತಂತ್ರಗಾರಿಕೆಯಗಳನ್ನು ನೋಡುತ್ತಿದ್ದೇವೆ. ಉದ್ಯೋಗ ಬಯಸಿ ಬರುತ್ತಿರುವ ಕಾರ್ಮಿಕರೆಲ್ಲರೂ ಅಸಂಘಟಿತ ವಲಯದಲ್ಲಿ ಕಂಡು ಬರುತ್ತಿರುವುದರಿಂದ, ಅವರಿಗೆ ಸ್ಥಿರವಾದ ವೇತನ, ಉದ್ಯೋಗ ಭದ್ರತೆ, ಮತ್ತು ಸಾಮಾಜಿಕ ಭದ್ರತೆಗಳಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ, ಲಿಂಗ ಮತ್ತು ಜಾತಿ ತಾರತಮ್ಯ, ಪಿತೃಪ್ರಭುತ್ವ ಮತ್ತು ಜಾತಿ ಸಮುದಾಯದ ಅಸಮಾನತೆಗಳು ಹೊಸ ಹೊಸ ರೂಪಗಳಲ್ಲಿ ಹೊರಹೊಮ್ಮುತ್ತಿವೆ. ಸಮಾನ ವೇತನ ನಿರಾಕರಣೆ ಮತ್ತು ಅನ್ಯಾಯಯುತ ಕೆಲಸದ ಪರಿಸ್ಥಿತಿಗಳೇ ಇದಕ್ಕೆ ಸಾಕ್ಷಿಯಾಗಿವೆ. ಸ್ವಾತಂತ್ರ್ಯದ ನಂತರದ ಪ್ರಾರಂಭಿಕ ವರ್ಷಗಳಲ್ಲಿ ಸರ್ಕಾರಿ ಸೇವೆಗಳಲ್ಲಿ ಸುರಕ್ಷಿತ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಸ್ಥಾಪನೆಯ ಮೂಲಕ ಕಾರ್ಮಿಕ ಕಾನೂನು ಆಡಳಿತವನ್ನು ಅಳವಡಿಸಲು ಮಾಡಿದ ಪ್ರಯತ್ನಗಳು ಇಂದು ಹಿಂದೆ ಬಿದ್ದಂತೆ ಕಾಣುತ್ತವೆ. ಇದೀಗ, ಖಾಸಗಿ ವಲಯದಲ್ಲಿ ಕಾರ್ಮಿಕರ ಹಕ್ಕುಗಳು ಕಣ್ಮರೆಯಾಗುತ್ತಿವೆ. ಆರ್ಥಿಕ ಉದಾರೀಕರಣದ ಈ ಹೊಸ ಘಟ್ಟದಲ್ಲಿ, ಕಾರ್ಮಿಕರು ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳಿಗಾಗಿ ಹಾಗೂ ಖಾಸಗೀ ವಲಯದಲ್ಲಿ ಕಾರ್ಮಿಕ ಕಾನೂನನ್ನು ಬಲಪಡಿಸುವಂತೆ ಒತ್ತಾಯಿಸಲು ಈ ಸಮ್ಮೇಳನವು ಒಂದು ವೇದಿಕೆಯಾಗಲಿದೆ ಎಂದವರು ವಿವರಿಸಿದ್ದಾರೆ.

You may also like

News

ರಾಜ್ಯ ಮಟ್ಟದ ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದ ದರ್ಬೆ ಬೆಥನಿ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ  ಕೆಜಿಎಫ್  ಪ್ರೌಢ ಶಾಲೆಯಲ್ಲಿ ಜನವರಿ 8 ಮತ್ತು 9ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ
News

ಉಡುಪಿ – ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ವಿರೋಧ ಮತ್ತು ಆಕ್ರೋಶ

ಯೋಜನೆ ನಿಲ್ಲಿಸದಿದ್ದಲ್ಲಿ ರೈತರಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ ಮಂಗಳೂರು: ಪ್ರಸ್ತಾವಿತ ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆ ವಿರೋಧಿಸಿ, ಜನವರಿ

You cannot copy content of this page