ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
![](https://karavalisuddi.com/wp-content/uploads/2024/11/muslim-leeg.webp)
ಮಂಗಳೂರು : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದರ ವಿದ್ಯಾರ್ಥಿ ಸಂಘಟನೆಯಾದ ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ (ಎಮ್.ಎಸ್.ಎಫ್) ಇದರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಎಮ್.ಎಸ್.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಪಿ.ವಿ ಅಹ್ಮದ್ ಸಾಜು ಅವರು ಮಂಗಳೂರಿನಲ್ಲಿ ಚಾಲನೆ ನೀಡಿದರು. ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಮುಹಾದ್ ಸರಳಿಕಟ್ಟೆ ಅವರಿಗೆ ಪ್ರಥಮ ಸದಸ್ಯತ್ವ ನೀಡುವ ಮೂಲಕ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಸಿ. ಅಬ್ದುರ್ರಹ್ಮಾನ್ ಮಂಗಳೂರು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವುದು, ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ನೀಡುವ ಬಗ್ಗೆ ಇನ್ನಿತರ ವಿಷಯಗಳ ಕುರಿತು ಮತ್ತು ಜಿಲ್ಲೆಯ ಕ್ಯಾಂಪಸ್ ಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಮುಸ್ಲಿಂ ಲೀಗ್ ಮುಖಂಡರಾದ ಟಿ.ಎ. ಅಹ್ಮದ್ ಮುಜೀಬ್ ದಿಕ್ಸೂಚಿ ಭಾಷಣಗೈದರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ನೀಡಬೇಕಾದ ಸೇವೆಯ ಕುರಿತು ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಮಾತನಾಡಿದರು. ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ಹಾಗೂ ಎಮ್.ಎಸ್.ಎಫ್. ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಅನ್ಸಾರ್ ವರ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಎಸ್.ಟಿ.ಯು. ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಶಬೀರ್ ಅಬ್ಬಾಸ್ ತಲಪಾಡಿ, ಮುಸ್ಲಿಂ ಯೂತ್ ಲೀಗ್ ಮುಖಂಡ ಹನೀಫ್ ಕುಂಜತ್ತೂರು, ಎಮ್.ಎಸ್.ಎಫ್. ಮಂಗಳೂರು ವಿಶ್ವವಿದ್ಯಾಲಯ ಸಮಿತಿ ಮುಖಂಡರಾದ ಆಶೀಖ್ ಮಲ್ಲೂರು, ಸಾಝೀಲ್ ಕಲಾಯಿ, ಯೇನಪೋಯ ವಿಶ್ವವಿದ್ಯಾಲಯ ಸಮಿತಿ ಮುಖಂಡರಾದ ಅತೂಫ್ ಮಂಜನಾಡಿ, ಅನ್ವಾಝ್ ಕಲ್ಕಟ್ಟ, ಪಿ.ಎ. ಕಾಲೇಜು ವಿದ್ಯಾರ್ಥಿ ಹಾದಿ ಮೊಂಟುಗೋಳಿ ಮತ್ತಿತ್ತರರು ಉಪಸ್ಥಿತರಿದ್ದರು. ಎಮ್.ಎಸ್.ಎಫ್. ಜಿಲ್ಲಾಧ್ಯಕ್ಷ ಝುಲ್ಛಿಕರ್ ಅಲೀ ಎಚ್. ಕಲ್ಲು ಸ್ವಾಗತಿಸಿದರು. ಜಂಶೀರ್ ಗುರುಪುರ ಕೈಕಂಬ ವಂದಿಸಿದರು.