ಮಂಗಳೂರು ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆ ಬೆಳ್ತಂಗಡಿಯಲ್ಲಿ ಉದ್ಘಾಟನೆ
ಮಂಗಳೂರು ಎಂ.ಸಿ.ಸಿ. ಬ್ಯಾಂಕಿನ 18ನೇ ಶಾಖೆಯು ಬೆಳ್ತಂಗಡಿ ಚರ್ಚ್ ರಸ್ತೆಯ ಹತ್ತಿರ, ಬೆಳ್ತಂಗಡಿ ಹೈವೆ, ವೈಬವ್ ಅರ್ಕೆಡ್‌ನ ನೆಲಮಹಡಿಯಲ್ಲಿ ನವಂಬರ್ 24ರಂದು ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ಶಾಖೆಯನ್ನು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಧರ್ಮಗುರು ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ಆಶೀರ್ವಚಿಸಿದರು.
ಭದ್ರತಾ ಕೊಠಡಿಯನ್ನು ಬೆಳ್ತಂಗಡಿ ಧರ್ಮಕ್ಷೇತ್ರದ ಪ್ರೊಕ್ಯೂರೇಟರ್ ಅತೀ ವಂದನೀಯ ಫಾದರ್ ಅಬ್ರಹಾಂ ಪಟ್ಟೆರಿಲ್ ಉದ್ಘಾಟಿಸಿದರು. ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಬೆಳ್ತಂಗಡಿ ಕಥೋಲಿಕ್ ಕ್ರೇಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆನ್ರಿ ಲೋಬೊ ಉದ್ಘಾಟಿಸಿದರು. ಸಿರಿಯನ್ ವಿವಿದ್ದೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಅಧ್ಯಕ್ಷ ಅನಿಲ್ ಎ.ಜೆ. ಉಪಸ್ಥಿತದ್ದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಪರಿಚಯಿಸಲು ಬೆಳ್ತಂಗಡಿ ಪರಿಸರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಭೇಟಿ ಮಾಡಿದ ಸಂದರ್ಭದಲ್ಲಿ ಬೆಳ್ತಂಗಡಿ ಪರಿಸರದ ಜನರು ನೀಡಿದ ಸಹಕಾರ ಮತ್ತು ಬೆಂಬಲಕ್ಕಾಗಿ ವಂದನೆಗಳನ್ನು ಸಲ್ಲಿಸಿದರು. ಶಾಖೆಯು ಪ್ರಾರಂಭವಾದ ಒಂದು ವರ್ಷದೊಳಗೆ ಲಾಭಗಳಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಹಕಾರ ಮತ್ತು ಬೆಂಬಲವನ್ನು ಕೋರಿದರು. ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆಗಳನ್ನು ಎಂ.ಸಿ.ಸಿ. ಬ್ಯಾಂಕ್ ಒದಗಿಸುತ್ತದೆ. ಈ ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದರಿಂದ ಬ್ಯಾಂಕಿನ ಠೇವಣಿಗಳಿಗೆ DICGC ವಿಮಾ ಸೌಲಭ್ಯವಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಗೂಗಲ್ ಪೇ ಮತ್ತು ಯುಪಿಐ ಪಾವತಿಗಳಂತಹ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಬ್ಯಾಂಕ್ ಬರಲಿದೆ ಎಂದು ಹೇಳಿ, ಬ್ಯಾಂಕಿನಲ್ಲಿರುವ ಖಾತೆಗಳಲ್ಲಿ ಸರಾಸರಿ ಒಂದು ಲಕ್ಷ ಇರುವ ಖಾತೆದಾರರಿಗೆ ಯಾವುದೇ ಸೇವಾ ಶುಲ್ಕವಿರುವುದಿಲ್ಲ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ವಿನಂತಿಸಿದರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ ಮುಂದಿನ ದಿನಗಳಲ್ಲಿ ಬ್ಯಾಂಕಿನ ಬೆಳವಣಿಗೆಗೆ ಸಹಕಾರ ಮತ್ತು ಬೆಂಬಲವನ್ನು ಕೋರಿದರು.
ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ಮಾತನಾಡಿ ಬೆಳ್ತಂಗಡಿಯಲ್ಲಿ ನೂತನ ಶಾಖೆಯನ್ನು ಆರಂಭಿಸಿ ಗ್ರಾಹಕ ಸ್ನೇಹಿ ವಾತವಾರಣವನ್ನು ಒದಗಿಸಿದ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು. ಬ್ಯಾಂಕಿನ ಮುಂದಿನ ಯೋಜನೆಗಳಿಗೆ ಆಶೀರ್ವಾದವನ್ನು ಕೋರಿ ಸಮಾಜದಲ್ಲಿ ವಿಶೇಷವಾಗಿ ಬಡವರು ಮತ್ತು ಕೆಳವರ್ಗದ ಜನರಿಗೆ ಬ್ಯಾಂಕ್ ವರದಾನವಾಗಲಿ ಎಂದು ಶುಭ ಹಾರೈಸಿದರು. ಮಾನಸಿಕ ಮತ್ತು ದೈಹಿಕವಾಗಿ ವಿಕಲಾಂಗ ವ್ಯಕ್ತಿಗಳು ಮತ್ತು ಅನಾಥರ ಆರೈಕೆಗಾಗಿ ಸಿಯೋನ್ ಅಶ್ರಮ್ ಟ್ರಸ್ಟ್, ಗುಂಡಿಬಾಗಿಲು ಮತ್ತು ಕೈಗೆಟಕುವ ದರದಲ್ಲಿ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ಫಾದರ್ ಎಲ್. ಎಮ್. ಪಿಂಟೊ ಹೆಲ್ತ್ ಕೇರ್ ಸೆಂಟರ್ ಚಾರಿಟೇಬಲ್ ಟ್ರಸ್ಟ್, ಬದ್ಯಾರ್ ಇವರಿಗೆ ಬ್ಯಾಂಕಿನ ಧತ್ತಿ ನಿಧಿಯಿಂದ ದೇಣಿಗೆಯನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಬೆಳ್ತಂಗಡಿ ಧರ್ಮಕ್ಷೇತ್ರದ ಪ್ರೋಕ್ಯುರೇಟರ್ ಅತೀ ವಂದನೀಯ ಫಾದರ್ ಅಬ್ರಹಾಂ ಪಟ್ಟೆರಿಲ್ ಮಾತನಾಡಿ ಸುತ್ತಮುತ್ತಲಿನ ಇತರ ಬ್ಯಾಂಕ್‌ಗಳಿಗಿಂತ ಭಿನ್ನವಾಗಿ ಮಾನವೀಯತೆಯ ಸೇವೆಯ ಉದಾತ್ತ ಉದ್ದೇಶದಲ್ಲಿ ತೊಡಗಿರುವ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಪ್ರೋತ್ಸಾಹಿಸುತ್ತಿರುವ ಎಂ.ಸಿ.ಸಿ. ಬ್ಯಾಂಕನ್ನು ಶ್ಲಾಘಿಸಿದರು. ಬ್ಯಾಂಕಿನ ಬೆಳವಣಿಗೆಗೆ ಸಾರ್ವಜನಿಕರು ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕೆಂದು ಕೋರಿದ ಇವರು ಸಮಾಜದ ಹಿತದೃಷ್ಟಿಯಿಂದ ಬ್ಯಾಂಕ್ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಶುಭ ಹಾರೈಸಿದರು.
ಸಮಾಜ ಸೇವೆಗಾಗಿ ವಿಶೇಷವಾಗಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಮತ್ತು ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡುತ್ತಿರುವ ಚಾರ್ಮಾಡಿ ಹಸನಬ್ಬ, ಕೃಷಿ ಮತ್ತು ತೋಟಗಾರಿಕೆಯಲ್ಲಿ ನವೀನ ಯೋಜನೆಗಳನ್ನು ಅನುಷ್ಟಾನಗೊಳಿಸಿದ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಕೊಡುಗೆಗಾಗಿ ಕಾಶ್ಮೀರ್ ಮಿನೇಜಸ್, ಸಾಮಾನ್ಯ ಜನರಿಗೆ ವೈದಕೀಯ ಸೇವೆಗಳನ್ನು ಒದಗಿಸುವ ಜನರ ವೈದ್ಯರಾಗಿರುವ ಗುರುವಾಯನ್‌ಕೆರೆಯ ಡಾ| ವೇಣುಗೋಪಾಲ್ ಶರ್ಮ ಮತ್ತು ದೈಹಿಕ ಅಸಾಮರ್ಥದ ಹೊರತಾಗಿಯೂ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಿದ ಕುಮಾರಿ ಸಬಿತಾ ಮೋನಿಸ್ ಇವರನ್ನು ಅವರ ಸೇವೆ ಮತ್ತು ಸಾಧನೆಗಾಗಿ ಬ್ಯಾಕಿನಿಂದ ಗುರುತಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರಿ ಸಬಿತಾ ಮೋನಿಸ್ ಬ್ಯಾಂಕಿನ ಸನ್ಮಾನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ ಬ್ಯಾಂಕಿಗೆ ಶುಭ ಹಾರೈಸಿದರು. ಕಟ್ಟಡ ಮಾಲಿಕ ಸೀತರಾಮ ಶೆಟ್ಟಿ, ಇಂಜಿನೀಯರ್ ಕಾರ್ತಿಕ್ ಕಿರಣ್ ಮತ್ತು ಶಾಖೆಯಲ್ಲಿ ಮೊದಲ ಖಾತೆಯನ್ನು ತೆರೆದ ಗ್ರಾಹಕರನ್ನು ಸನ್ಮಾನಿಸಲಾಯಿತು. ಮೊದಲ ಖಾತೆ ತೆರೆದ ಸವಿತಾ ಬ್ಯಾಪ್ಟಿಸ್ಟ್ ಇವರ ಜನನ ದಿನಾಚರಣೆಯನ್ನು ಈ ಸಂದರ್ಭದಲ್ಲಿ ಆಚರಿಸಲಾಯಿತು.
ಉಪಾಧ್ಯಕ್ಷ ಜೆರಾಲ್ಡ್ ಡಿಸಿಲ್ವಾ, ನಿರ್ದೆಶಕರಾದ ಡೆವಿಡ್ ಡಿಸೋಜ, ಅನಿಲ್ ಪತ್ರಾವೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ಡಾ| ಫ್ರೀಡಾ ಡಿಸೋಜ, ಐರಿನ್ ರೆಬೆಲ್ಲೊ, ಡಾ| ಜೆರಾಲ್ಡ್ ಪಿಂಟೊ, ಎಲ್‌ರೊಯ್ ಕಿರಣ್ ಕ್ರಾಸ್ತೊ, ಜೆ.ಪಿ. ರೊಡ್ರಿಗಸ್, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಆಲ್ವಿನ್ ಪಿ. ಮೊಂತೇರೊ, ಮಹಾಪ್ರಬಂದಕ ಸುನಿಲ್ ಮಿನೇಜಸ್ ಹಾಜರಿದ್ದರು. ನಿರ್ದೇಶಕ ವಿನ್ಸೆಂಟ್ ಲಸ್ರಾದೊ ಸ್ವಾಗತಿಸಿ ಶಾಖಾ ವ್ಯವಸ್ಥಾಪಕ ಶಾರುನ್ ಪಿಂಟೊ ವಂದಿಸಿದರು. ಅವಿಲ್ ಮೋರಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.