ತುಂಬೆಯಲ್ಲಿ ವಿಮೆ ಹಾಗೂ ಆರೋಗ್ಯ ಕಾರ್ಡ್ ನೋಂದಣಿ ಶಿಬಿರ

ಬಂಟ್ವಾಳ: ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ್ ಮಹಿಳಾ ಸಂಘ ಇದರ ಆಶ್ರಯದಲ್ಲಿ ಅಂಚೆ ಇಲಾಖೆಯ ಅಪಘಾತ ವಿಮೆ, ಆಯುಷ್ಮಾನ್ ಕಾರ್ಡ್, ಸೀನಿಯರ್ ಸಿಟಿಜನ್ ಕಾರ್ಡ್ ನೋಂದಾವಣಿ ಶಿಬಿರ ತುಂಬೆ ಬೊಳ್ಳಾರಿಯ ಸಂಘದ ಕಚೇರಿಯಲ್ಲಿ ನವಂಬರ್ 24ರಂದು ಭಾನುವಾರ ನಡೆಯಿತು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಶಿಬಿರ ಉದ್ಘಾಟಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಬಳಿಕ ಮಾತನಾಡಿ ‘ಜನರ ಉಪಯೋಗಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಮಾಹಿತಿಯ ಕೊರತೆಯಿಂದ ಅನೇಕ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ. ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಸರಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಿದೆ’ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ತುಂಬೆ ಗ್ರಾಮ ಪಂಚಾಯತಿ ಸದಸ್ಯ ಕಿಶೋರ್, ಮಹಿಳಾ ಸಂಘದ ಅಧ್ಯಕ್ಷೆ ಜಲಜಾಕ್ಷಿ, ಗೌರವಾಧ್ಯಕ್ಷೆ ಪಾರ್ವತಿ ಐತಪ್ಪ ಕುಲಾಲ್, ಅಧ್ಯಕ್ಷ ಚೆನ್ನಕೇಶವ, ಗ್ರಾಮ 1 ವ್ಯವಸ್ಥಾಪಕ ರಂಜಿತ್, ಪಂಚಾಯತಿನ ಮಾಜಿ ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ, ಸಂಘದ ಕಾರ್ಯದರ್ಶಿ ಪ್ರವೇಶ್ ಕುಮಾರ್ ಉಪಸ್ಥಿತರಿದ್ದರು. ಸಂಚಾಲಕ ಸುಶಾಂತ್ ಕಾರ್ಯಕ್ರಮ ನಿರೂಪಿಸಿದರು.