ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ, ಬೃಹತ್ ಜಾಥಾ ಹಾಗೂ ಬಹಿರಂಗ ಸಭೆ

ಮೋದಿ ಸರಕಾರ ಕಾರ್ಪೋರೇಟ್ ಗಳಿಗೆ ಲಾಭ ಮಾಡಿಕೊಡುತ್ತಿದೆ – ಕಾಮ್ರೇಡ್ ವಿ. ಶಂಕರ್
ಬಂಟ್ವಾಳ : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕರಿಗೆ ಇರುವ ಎಲ್ಲಾ ನ್ಯಾಯಯುತ ಸೌಲಭ್ಯಗಳನ್ನು ಕಸಿದುಕೊಳ್ಳಲಾಗಿದೆ ಎಂದು ಎ.ಐ.ಸಿ.ಸಿ.ಟಿ.ಯು. ರಾಷ್ಟ್ರೀಯ ಅಧ್ಯಕ್ಷ ಕಾಮ್ರೇಡ್ ವಿ. ಶಂಕರ್ ಹೇಳಿದರು. ಬಿ.ಸಿ. ರೋಡಿನ ಅಂಬೆಡ್ಕರ್ ಭವನದಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಇದರ ಕರ್ನಾಟಕ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಆ ಮೂಲಕ ಮೋದಿ ಸರಕಾರವು ಕಾರ್ಪೋರೇಟ್ ಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು. ಎಐಸಿಸಿಟಿಯು ಪ್ರಥಮ ರಾಜ್ಯ ಸಮ್ಮೇಳನವು ಬಂಟ್ವಾಳದಲ್ಲಿ ನಡೆಯುತ್ತಿರುವುದು ಬಹಳ ಒಳ್ಳೆಯ ಬೆಳವಣಿಗೆ ಯಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಮಿಕ ಚಳುವಳಿಯನ್ನು ಬಲಿಷ್ಠಗೊಳಿಸಲು ಇದು ಒಂದು ಹೆಜ್ಜೆಯಾಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಐಸಿಸಿಟಿಯು ರಾಜ್ಯ ಅಧ್ಯಕ್ಷ ಕಾಮ್ರೇಡ್ ಕ್ಲಿಪ್ಟನ್ ಡಿ. ರೊಜಾರಿಯೋ ಮಾತನಾಡಿ, ಕಾರ್ಮಿಕರ ಸಮಸ್ಯೆಯನ್ನು ಯಾವುದೇ ಸರಕಾರ ಬಗೆಹರಿಸುತ್ತದೆ ಎಂಬ ಭ್ರಮೆಯಿಂದ ಹೊರ ಬಂದು ನಮ್ಮ ಸಂಘಟನೆ, ನಮ್ಮ ಸಿದ್ದಾಂತ, ನಮ್ಮ ಹೋರಾಟದಿಂದ ಮಾತ್ರ ಬಗೆಹರಿಸಲು ಸಾದ್ಯ ಎಂಬುದನ್ನು ಅರಿತು ಕಾರ್ಯ ಪೃವೃತ್ತರಾಗೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಐಸಿಸಿಟಿಯು ರಾಷ್ಟ್ರೀಯ ಕಾರ್ಯದರ್ಶಿ ಕಾಮ್ರೇಡ್ ರಾಜೀವ್ ದಿಮ್ರಿ ಮಾತನಾಡಿ ಕಾರ್ಮಿಕರು ಹೋರಾಟದ ಮೂಲಕ ಪಡೆದ ಹಕ್ಕುಗಳನ್ನು ಕೇಂದ್ರ ಸರಕಾರವು ಕಸಿದು ಕೊಂಡು ಕಾರ್ಮಿಕ ಕಾನೂನುಗಳನ್ನು ನಾಶ ಮಾಡಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲಾಗಿದೆ, ಕಾರ್ಮಿಕರ ಒಗ್ಗಟ್ಟನ್ನು ಜಾತಿ ಧರ್ಮದ ಹೆಸರಿನಲ್ಲಿ ಒಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಎಐಸಿಸಿಟಿಯು ಸಮ್ಮೇಳನ ಬಂಟ್ವಾಳದಲ್ಲಿ ನಡೆಯುತ್ತಿರುವುದು ಬಹಳ ಮಹತ್ವದ್ದಾಗಿದೆ ಎಂದರು. ಎಐಯುಟಿಯುಸಿ ರಾಜ್ಯ ಮುಖಂಡ ಕೆ.ವಿ. ಭಟ್, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ವಕೀಲ ವಿನಯ್ ಶ್ರೀನಿವಾಸ್ , ಹಿರಿಯ ಕಾರ್ಮಿಕ ಮುಖಂಡ ಬಿ. ವಿಷ್ಣು ಮೂರ್ತಿ ಭಟ್ , ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಮಾತನಾಡಿದರು.
ಸ್ವಾಗತ ಸಮಿತಿ ಗೌರವ ಅಧ್ಯಕ್ಷರು ರಾಜಾ ಚೆಂಡ್ತಿಮಾರ್, ರಾಜ್ಯ ಸಮಿತಿ ಸದಸ್ಯರು ಮೈತ್ರೇಯಿ ಕೃಷ್ಣನ್, ಮೋಹನ್ ಕೆ.ಇ., ವಿಜಯ್ ಗಂಗಾವತಿ, ನಿರ್ಮಲ, ಗೌರಿ, ಮಂಜುನಾಥ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದ ಅಂಗವಾಗಿ ಬಿ.ಸಿ. ರೋಡ್ ಕೈಕಂಭದಿಂದ ಅಂಬೇಡ್ಕರ್ ಭವನದ ತನಕ ಕಾರ್ಮಿಕರ ಬೃಹತ್ ರ್‍ಯಾಲಿ ನಡೆಯಿತು. ರ್‍ಯಾಲಿಯಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು.
ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಕಾಮ್ರೇಡ್ ರಾಮಣ್ಣ ವಿಟ್ಲ ಸ್ವಾಗತಿಸಿ, ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಪಿ.ಪಿ. ಅಪ್ಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ನಾಗರಾಜ್ ಪೂಜಾರ್, ಕಾಮ್ರೇಡ್ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.