ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರೌಢ ಶಾಲಾ ವಿಭಾಗದ ವಾರ್ಷಿಕೋತ್ಸವ

“ವಿಶ್ವ ನಾಗರಿಕರನ್ನಾಗಿ ರೂಪಿಸುವುದು”
“ಎಲ್.ಸಿ.ಯಸ್. ನ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವುತ್ತಿರುವುದು ಸಂತೋಷದ ವಿಷಯವಾಗಿದೆ. ಇದು ವಿದ್ಯಾರ್ಥಿ ಜೀವನದ ಮರೆಯಲಾಗದ ಘಟನೆ. ಈ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು. ಲೂರ್ಡ್ಸ್ ವಿದ್ಯಾಲಯವು ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಆಂತರಿಕ ಬೆಳವಣಿಗೆಗೆ ಸದಾ ಶ್ರಮಿಸುತ್ತಿದೆ. ಅಡಳಿತ ಮಂಡಳಿಯು ಮೌಲ್ಯಾದಾರಿತ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಜೊತೆಗೆ ಸುರಕ್ಷತೆ ಅನುಭವಿ ಶಿಕ್ಷಕ ವೃಂದ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಈ ಸಂಸ್ಥೆಯು ಮಂಗಳೂರು ನಗರದಲ್ಲಿ ಹೆಸರು ಮತ್ತು ಕೀರ್ತಿಯನ್ನು ಗಳಿಸುತ್ತಾ ಪ್ರಗತಿ ಪಥದತ್ತ ಮುಂದುವರಿಯುತ್ತಿದೆ.
ಪೋಷಕರು ತಮ್ಮ ಮಕ್ಕಳನ್ನು ಗೌರವದಿಂದ ನಡೆದುಕೊಳ್ಳುವಂತೆ ರೂಪಿಸಿ, ಗೌರವಿಸಿ ಅವರ ನಿರಂತರ ಕಲಿಕೆಗೆ ಪ್ರೋತ್ಸಾಹವನ್ನು ನೀಡಿ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಸಮಾಜ ಮತ್ತು ರಾಷ್ಟçದ ಋಣವನ್ನು ತೀರಿಸಬೇಕಾಗಿದೆ. ಸಮಾಜದಿಂದ ನಾವು ಪಡೆದುದ್ದನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿ ಶಾಲೆಯ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಬೇಕು” ಎಂದು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಮಾಜಿ ಪ್ರಾಂಶುಪಾಲ ಹಾಗೂ ಸಂತ ಅಂತೋನಿ ಚರ್ಚ್ ಅಲ್ಲಿಪಾದೆ ಇದರ ಧರ್ಮಗುರು ವಂದನೀಯ ಫಾದರ್ ರಾಬರ್ಟ್ ಡಿಸೋಜ ಸಂದೇಶವನ್ನು ನೀಡಿದರು. ಇವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರೌಢ ವಿಭಾಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾಲೆಯ ಸಂಚಾಲಕ ವಂದನೀಯ ಫಾದರ್ ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ಡಾನಾ “ಪ್ರತಿ ಮಗುವನ್ನು ವಿಶ್ವ ನಾಗರಿಕನನ್ನಾಗಿ ರೂಪಿಸುವುದು ಜಗತ್ತಿನ ಅನಿವಾರ್‍ಯತೆ. ಎಲ್ಲ ಮೌಲ್ಯವನ್ನು ಬೆಳೆಸಿಕೊಂಡು ಮಾನವತೆಗಾಗಿ ಸರ್ವರೂ ಬೆಳೆಯಬೇಕಾಗಿದೆ. ಎಲ್.ಸಿ.ಯಸ್. ಅದಕ್ಕೆ ಉತ್ತಮ ಮಾದರಿಯನ್ನು ರೂಪಿಸುತ್ತಿದೆ. ಶಾಲೆಯ ಮಾತೆಯಾದ ಮೇರಿಯು ಪ್ರಾನ್ಸ್ ನ ಲೂರ್ಡ್ಸ್ ಮಾತೆಯಾಗಿದ್ದು, ಅವರ ವಿಶೇಷತೆಯನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ. ಮಾತೆಯ ಆಶೀರ್ವಾದದಿಂದ ನಮ್ಮ ವಿದ್ಯಾಲಯವು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ಬೆಳೆಯುತ್ತಿದೆ. ‘ಶಾಂತಿಯಿಂದ ಜ್ಞಾನ’ಎನ್ನುವ ನಮ್ಮ ಶಾಲೆಯ ಧ್ಯೇಯವಾಕ್ಯವು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ.
ಶಿಕ್ಷಕರು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಅವರಲ್ಲಿ ಗುಣಾತ್ಮಾಕ ಶಿಕ್ಷಣವನ್ನು ರೂಡಿಸಬೇಕಾಗಿದೆ. ಇಂತಹ ಶಿಕ್ಷಣದಿಂದ ಮಾತ್ರ ಪ್ರಪಂಚದಲ್ಲಿ ಎಲ್ಲಿಬೇಕಾದರೂ ಧೈರ್ಯದಿಂದ ಬದುಕಲು ಸಾಧ್ಯ. ವಿದ್ಯಾರ್ಥಿಗಳು ಮೌಲ್ಯದಾರಿತ ಶಿಕ್ಷಣವನ್ನು ಪಡೆದು, ಗುಣಾತ್ಮಕ ಕಲಿಕೆಗಾಗಿ ನಮ್ಮ ಆಡಳಿತ ಮಂಡಳಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ. ಪೋಷಕರು ಮಕ್ಕಳೊಂದಿಗೆ ಬೆರೆಯಿರಿ ಅವರ ಉಜ್ವಲ ಭವಿಷ್ಯಕ್ಕಾಗಿ ಭದ್ರ ಬುನಾದಿಯನ್ನು ರೂಪಿಸಿ ನಿಮ್ಮ ಮಕ್ಕಳಲ್ಲಿ ನೈತಿಕ ಪ್ರಜ್ನೆ ಹಾಗೂ ನೀತಿಯುಕ್ತ ನಡವಳಿಕೆಗಳನ್ನು ಅಳವಡಿಸಿ, ಅವರು ಶಾಲೆ ಹಾಗೂ ಕುಟುಂಬದ ಬೆಳಕಾಗಿ ಬೆಳಗುವರು” ಎಂದು ಹರಸಿದರು.
ಪ್ರಾಂಶುಪಾಲರಾದ ವಂದನೀಯ ಫಾದರ್ ಜಾನ್ಸನ್ ಎಲ್. ಸಿಕ್ವೇರಾ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ವಾಚಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವೇದಿಕೆಯಲ್ಲಿ ಬಿಜೈ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಅಶೋಕ್ ಪಿಂಟೋ, ಕಾರ್ಯದರ್ಶಿ ಅವಿತಾ ಸಿಂಥಿಯಾ ಪಿಂಟೋ, ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷ ಮೊಹಮ್ಮದ್ ರಿಯಾಜ್, ಶಾಲಾ ನಾಯಕ ಎಚ್. ಆದೇಶ್ ರಾವ್, ನಾಯಕಿ ದಿಯಾ ಎನ್. ಯಶೋಧರ್ ಉಪಸ್ಥಿತರಿದ್ದರು.
ಗಣ್ಯರು ಗೌರವಾನ್ವಿತ ಮುಖ್ಯ ಅತಿಥಿಗಳನ್ನು ನೆನಪಿನ ಕಾಣಿಕೆ, ಸ್ಮರಣಿಕೆ ನೀಡಿ, ಶಾಲನ್ನು ಹೊದಿಸಿ ಗೌರವಿಸಿದರು. ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ನೆರೆದಿರುವ ಸರ್ವರನ್ನು ಆದರದಿಂದ ಸ್ವಾಗತಿಸಿದರು. ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಸಾಧಕರನ್ನು ಹಾಗೂ ವಿಶೇಷ ಕ್ರೀಡಾ ಸಾಧಕರನ್ನು ಗಣ್ಯರು ದತ್ತಿ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು. ವಿದ್ಯಾರ್ಥಿಗಳು ತಾಯ್ನಾಡಿನ ರಕ್ಷಣೆ ಮತ್ತು ಸೇವೆ, ಸಂಭವನೀಯ ಮಿಷನ್, ವನ್ಯ ಜೀವನ ಪ್ರಪಂಚದ ಪ್ರತಿಧ್ವನಿ, ಅನೇಕತೆಯಲ್ಲಿ ಏಕತೆ, ಕಾಲಾತೀತ ಪ್ರಯಾಣ ಮೊದಲಾದ ಸಂದೇಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ಅವಾಧ್ಯ ಹೆಗ್ಡೆ, ರಿಧಾಂತ್ ಪಡಿವಾಳ್, ರಿಯಾನ್ ರಿಚೆಲ್ ಗೋನ್ಸಾಲ್ವಿಸ್, ಕೆ. ಅನಿರುದ್ಧ್, ಎಮಿಲಿ ಜಿಯಾ ರೊಡ್ರಿಗಸ್, ತುಳಸಿ ಹರಿಪ್ರಸಾದ್, ಸ್ಕಂಧಾ ಆರ್. ನಂಬಿಯಾರ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ದೀಪಾ ಡಿಸೋಜ ಕಾರ್ಯಕ್ರಮ ಸಂಯೋಜಿಸಿ, ವಂದನ್ಯ ಧರ್ಮಗುರು ಅರುಲ್ ಜೋಸೆಫ್, ಡೆಲ್ಲಾ ಕುಲಾಸೊ ಸಹಕರಿಸಿದರು. ಉಪಪ್ರಾಂಶುಪಾಲೆ ಅನಿತಾ ಥೋಮಸ್ ಧನ್ಯವಾದ ಸಮರ್ಪಿಸಿದರು.