ಉಜಿರೆ ಚರ್ಚ್ ನಲ್ಲಿ ನೂತನ ಮನೆಯ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮ

ಚರ್ಚ್ ಧರ್ಮಗುರು ಫಾದರ್ ಆಬೆಲ್ ಲೋಬೊ, ಉಪಾಧ್ಯಕ್ಷ ಆಂತೋನಿ ಫೆರ್ನಾಂಡಿಸ್ ನೇತೃತ್ವ.
ಉಜಿರೆ ಸಂತ ಅಂತೋನಿ ಚರ್ಚ್ ಇದರ ನೇತೃತ್ವದಲ್ಲಿ ಅಶಕ್ತ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ ಹಾಗೂ ಆಶೀರ್ವಚನ ಕಾರ್ಯಕ್ರಮವು ಉಜಿರೆಯಲ್ಲಿ ನಡೆಯಿತು. ಸಂತ ಅಂತೋನಿ ಚರ್ಚಿನ ಧರ್ಮಗುರು ವಂದನೀಯ ಫಾದರ್ ಅಬೆಲ್ ಲೋಬೊ ಇವರ ಮಾರ್ಗದರ್ಶನದಲ್ಲಿ ಪಾಲನಾ ಸಮಿತಿಯ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್ ಇವರ ಮುಂದಾಳತ್ವದಲ್ಲಿ ಎನ್.ಆರ್.ಐ. ಉದ್ಯಮಿ ಮೈಕಲ್ ಡಿಸೋಜ ಪುತ್ತೂರು, ಸಿಒಡಿಪಿ ಹಾಗೂ ಬೆಳ್ಮಣ್ ನ ಹ್ಯುಮಾನಿಟಿ ಟ್ರಸ್ಟ್ ಸಂಸ್ಥೆಗಳು ಹಾಗೂ ಊರ ಪರವೂರ ದಾನಿಗಳ ನೆರವಿನಿಂದ ಈ ಮನೆ ನಿರ್ಮಿಸಲಾಗಿದೆ.
ಇದು ಉಜಿರೆ ಚರ್ಚ್ ನ 5ನೇ ಗೃಹ ಯೋಜನೆಯಾಗಿದ್ದು ಇದುವರೆಗೆ ಸುಮಾರು 37 ಲಕ್ಷ ರೂಪಾಯಿ ವೆಚ್ಚದಲ್ಲಿ 2021ರಿಂದ ಇಂದಿನವರೆಗೆ ಮೂರು ಮನೆಗಳ ನವೀಕರಣ ಹಾಗೂ 2 ನೂತನ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ ಇದರ ಸಂಸ್ಥಾಪಕ ರೋಶನ್ ಡಿಸೋಜ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಭಾಗವಹಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಸಂತ ಅಂತೋನಿ ಚರ್ಚ್ ಇದರ ಧರ್ಮಗುರು ವಂದನೀಯ ಫಾದರ್ ಅಬೆಲ್ ಲೋಬೊ ವಹಿಸಿದ್ದರು.
ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ವಿಜಯ್ ಲೋಬೊ, ದಯಾ ವಿಶೇಷ ಶಾಲೆಯ ದರ್ಮಗುರು ವಂದನೀಯ ಫಾದರ್ ವಿನೋದ್ ಮಸ್ಕರೆನಸ್, ಕಾಪುಚಿನ್ ಅಶ್ರಮ ದಯಾಳ್ ಭಾಗ್ ಧರ್ಮಗುರು ವಂದನೀಯ ಫಾದರ್ ಎಲ್ವಿನ್ ಲೋಬೊ, ಕಾನ್ವೆಂಟ್ ಸುಪೀರಿಯರ್ ಧರ್ಮ ಭಗಿನಿ ನ್ಯಾನ್ಸಿ ಡಯಾಸ್, ಫಲಾನುಭವಿ ರೋಜಿ ಪಾಯ್ಸ್ ಕುಟುಂಬಸ್ಥರು ಹಾಜರಿದ್ದರು. ಕಾರ್ಯಕ್ರಮವನ್ನು ಪಾಲನಾ ಸಮಿತಿಯ ಕಾರ್ಯದರ್ಶಿ ಲಿಗೋರಿ ವಾಸ್ ಸ್ವಾಗತಿಸಿ, ಸಂಯೋಜಕಿ ಲವೀನಾ ಫೆರ್ನಾಂಡಿಸ್ ನಿರೂಪಿಸಿ ವಂದಿಸಿದರು.
ಧರ್ಮಗುರುಗಳ ಜೊತೆ, ಸಂತ ಲಾರೆನ್ಸ್ ವಾಳೆಯ ಗುರಿಕಾರ ಮರ್ಲಿನ್ ಪಿರೇರಾ ಮನೆ ಆಶೀರ್ವಚನದ ಪ್ರಾರ್ಥನೆ ಮಾಡಲು ಸಹಕರಿಸಿದರು. ಎಲ್ಲರಿಗೂ ಬೋಜನ ವ್ಯವಸ್ಥೆ ಮಾಡಲಾಗಿತ್ತು.