ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನ, ಅಶಕ್ತರಿಗೆ ನೆರವು, ಔಷಧ – ಆಹಾರ ಕಿಟ್ ವಿತರಣೆ
![](https://karavalisuddi.com/wp-content/uploads/2024/11/new-india-1.webp)
ಬೆಳ್ತಂಗಡಿ : ಕರ್ನಾಟಕದ ಕರಾವಳಿಯು ಈ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದ್ದು ಇತ್ತೀಚಿನ ದಿನಗಳಲ್ಲಿ ಕೋಮು ಸಂಘರ್ಷಕ್ಕೆ ಹೆಸರಾಗಿದ್ದು ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರಿ ಸೌಹಾರ್ದತೆ ಮತ್ತು ಸಹೋದರತೆ ಕಣ್ಮರೆಯಾಗಿತ್ತು. ಆದರೆ ಇಂದಿನ ಈ ಕಾರ್ಯಕ್ರಮದಲ್ಲಿ ಸೌಹಾರ್ದತೆ, ಸಮಾನತೆ ಹಾಗೂ ಸಹೋದರತೆಯನ್ನು ಕಂಡು ಮನಸ್ಸು ತುಂಬಿ ಬಂತು. ಯಾರೋ ಸ್ವಾರ್ಥಿಗಳ ದ್ವೇಷ ಭಾಷಣಕ್ಕೆ ಕಿವಿಕೊಡದೆ ಜಾತಿ ಮತ ಧರ್ಮಗಳ ಬೇಧವಿಲ್ಲದೆ ನಿಸ್ವಾರ್ಥ ಸೇವಾ ಮನೋಭಾವದಿಂದ ಅಶಕ್ತರ ಪಾಲಿಗೆ ನೆರವಾಗುವ ಈ ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯಗಳಿಂದ ಕರಾವಳಿಯಲ್ಲಿ ಇನ್ನೂ ಕೂಡ ಸರ್ವಧರ್ಮ ಸೌಹಾರ್ದತೆ ಮತ್ತು ಸಹೋದರತೆ ಜೀವಂತವಿದೆ ಎನ್ನುವುದಕ್ಕೆ ಈ ವೇದಿಕೆಯೇ ಸಾಕ್ಷಿ. ಜಾತಿ ಮತ ಧರ್ಮಗಳ ಬೇಧವಿಲ್ಲದೆ ಎಲ್ಲಾ ವರ್ಗದ ಅರ್ಹರಿಗೆ ಸಹಾಯ ಮಾಡುವ ಈ ಸತ್ಕಾರ್ಯಗಳಿಗೆ ನಾವು ಮಾದರಿಯಾಗಿಸೋಣ ಎಂದು ಕಾರ್ಕಳ ಸುನ್ನಿ ಯುವಜನ ಸಂಘದ ವಲಯ ಕಾರ್ಯದರ್ಶಿ ಜನಾಬ್ ಮೌಲಾನಾ ಹುಸೈನ್ ಸ’ಅದಿ ಹೊಸ್ಮಾರ್ ಅಭಿಪ್ರಾಯಪಟ್ಟರು.
ಅವರು ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ರಿ. ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಸುವರ್ಣ ಆರ್ಕೇಡ್ ಸಪ್ತಪದಿ ಸಭಾಂಗಣದಲ್ಲಿ ಅಶಕ್ತರಿಗೆ ಧನಸಹಾಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರೋಗಿಗಳಿಗೆ ಔಷಧ ಮತ್ತು ವಿಧವೆಯರಿಗೆ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ಮಾತಾನಾಡಿದರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಜನಾಬ್ ಮೊಹಮ್ಮದ್ ಅಶ್ರಫ್ ಬಜಪೆಯವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ಪ್ರಶಂಸೆಯ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ಬಿ.ಜಿ. ಸುಬ್ಬಾಪೂರ ಮಠ್, ಲ್ಯಾಲೆಂಟ್ ರಿಸರ್ಚ್ ಫೌಂಡೇಷನ್ ನ ರಫೀಕ್ ಮಾಸ್ಟರ್, ಪತ್ರಕರ್ತ ಮನೋಹರ್ ಬಳೆಂಜ, ಅಶ್ರಫ್ ಆಲಿಕುಂಞಿ ಮುಂಡಾಜೆ , ನಾಣ್ಯಪ್ಪ ಪೂಜಾರಿ, ಉದ್ಯಮಿ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ, ಶರಿಫ್ ಮಲ್ನಾಡ್ ಕಳಸ, ಜುಬೈರ್ ಮಂಗಳೂರು ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಜನಾಬ್ ಮೊಹಮ್ಮದ್ ಅಶ್ರಫ್ ಬಜ್ಪೆ ಮಾತನಾಡಿ ನನ್ನ ದುಡಿಮೆಯ ಒಂದಂಶವನ್ನು ಈ ಸರ್ವ ಧರ್ಮದ ಸಹೋದರ, ಸಹೋದರಿಯರಿಗೆ ನೀಡಿ ನನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಹೊರತು ನನ್ನದೇನು ಇಲ್ಲ. ಇವತ್ತು ನಾನು ಏನು ಕೊಡುತ್ತಿದ್ದೇನೋ ಅದು ಈ ಸಮಾಜದಿಂದಲೇ ನನಗೆ ಬಂದಿರುವುದು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಹಿಂತಿರುಗಿಸುತ್ತೇನೆ ಅಷ್ಟೇ ಎಂದು ಹೇಳಿದರು.
ವೇದಿಕೆಯಲ್ಲಿ ಅಬ್ದುಲ್ ಖಾದರ್, ಲತೀಫ್ ಉಣ್ಣಾಲು, ಜುನೈದ್ ಅಝ್ಹರಿ ಉಣ್ಣಲು, ಇಬ್ರಾಹಿಂ ಮುಸ್ಲಿಯಾರ್, ಆಸಿಫ್ ಉಬಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಬೆಳ್ತಂಗಡಿ ಕಛೇರಿ ವ್ಯವಸ್ಥಾಪಕ ಇಸ್ಮಾಯಿಲ್ ಗುರುವಾಯನಕೆರೆ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ 103 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನಿಧಿ, 88 ಅಶಕ್ತರಿಗೆ ಆಹಾರ ಕಿಟ್ ಮತ್ತು 88 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಸಮದ್ ಮಂಗಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.