ಉದ್ಯಾವರ ಚರ್ಚ್ ನ ಆಡಳಿತ ಮಂಡಳಿಯ ಉಪಾಧ್ಯಕ್ಷ ನಿಧನ – ಮದುವೆಯಲ್ಲೂ ಹಾಗೂ ಸಾವಿನಲ್ಲೂ ಒಂದಾದ ದಂಪತಿ!
ಮನಕಲಕುವ ಹೃದಯ ವಿದ್ರಾವಕ ಘಟನೆ – ಚರ್ಚ್ ಧರ್ಮಗುರು ಫಾದರ್ ಅನಿಲ್ ಡಿಸೋಜರವರಿಂದ ತೀವ್ರ ಸಂತಾಪ ಸೂಚನೆ
ಉಡುಪಿ : ಉಡುಪಿ ಧರ್ಮಕ್ಷೇತ್ರದ ಉದ್ಯಾವರ ಧರ್ಮಕೇಂದ್ರದಲ್ಲಿ ಮನಕಲಕುವ ಹೃದಯ ವಿದ್ರಾವಕ ಘಟನೆ ನವಂಬರ್ 29ರಂದು ಶುಕ್ರವಾರ ನಡೆದಿದೆ. ದಶಂಬರ್ 4ರಂದು ಚರ್ಚ್ ವಾರ್ಷಿಕ ಹಬ್ಬ ಆಚರಣೆಯಲ್ಲಿದ್ದ ಉದ್ಯಾವರ ಧರ್ಮಕೇಂದ್ರ ಶೋಕ ಸಾಗರದಲ್ಲಿ ಮುಳುಗಿದೆ. ತನ್ನ ಪತ್ನಿ ಸಾವನ್ನಪ್ಪಿದ ಮರುದಿನವೇ ಚರ್ಚ್ ಆಡಳಿತ ಮಂಡಳಿಯ ಪ್ರಸ್ತುತ ಉಪಾಧ್ಯಕ್ಷ 62ವರ್ಷ ಪ್ರಾಯದ ಲಾರೆನ್ಸ್ ಡೇಸಾರವರೂ ಸಾವನ್ನಪ್ಪಿರುವುದು ತೀವ್ರ ಆಘಾತ ಉಂಟುಮಾಡಿದೆ. ಇವರ ಪತ್ನಿ ಕಾರ್ಕಳ ತಾಲೂಕು ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ 56ವರ್ಷ ಪ್ರಾಯದ ಜೂಲಿಯಾನಾ ಹೆಲೆನ್ ರೆಬೆಲ್ಲೋ ಇವರು ನವಂಬರ್ 28ರಂದು ನಿಧನ ಹೊಂದಿದ್ದರು. ಅವರ ಅಂತ್ಯಕ್ರಿಯೆ ನಡೆಯುವ ಮೊದಲೇ ಪತಿ ಕೂಡ ಸಾವನ್ನಪ್ಪಿದ್ದು, ಆದರ್ಶ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಲಾರೆನ್ಸ್ ಡೇಸಾ ಇವರು ಉದ್ಯಾವರ ಗ್ರಾಮ ಪಂಚಾಯತ್ ಹಾಲಿ ಸದಸ್ಯರು ಕೂಡ ಆಗಿದ್ದಾರೆ.
ಒಂದೇ ದಿನದ ಅಂತರದಲ್ಲಿ ಇವರೀರ್ವರ ಮರಣಕ್ಕೆ ಉದ್ಯಾವರ ಧರ್ಮಕೇಂದ್ರದ ಚರ್ಚ್ ಧರ್ಮಗುರು ವಂದನೀಯ ಫಾದರ್ ಅನಿಲ್ ಡಿಸೋಜ, ಕಾರ್ಯದರ್ಶಿ ಜೋನ್ ಎಂ. ಡಿಸೋಜ, ಆಯೋಗಗಳ ಸಂಯೋಜಕ ಜೆರಾಲ್ಡ್ ಪಿರೇರಾ, ಚರ್ಚ್ ಆಡಳಿತ ಮಂಡಳಿ, ಕಥೊಲಿಕ್ ಸಭಾ ಉಡುಪಿ ಕೇಂದ್ರೀಯ ಅಧ್ಯಕ್ಷ ಸಂತೋಷ್ ಕರ್ನೇಲಿಯೊ, ಉದ್ಯಾವರ ಘಟಕದ ಅಧ್ಯಕ್ಷೆ ಐರಿನ್ ಪಿರೇರಾ ಮತ್ತು ಭಕ್ತಾಧಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಇವರೀರ್ವರ ಅಂತ್ಯಕ್ರಿಯೆಯು ಉದ್ಯಾವರ ಧರ್ಮಕೇಂದ್ರದಲ್ಲಿ ದಶಂಬರ್ 2ರಂದು ಸೋಮವಾರ ಸಂಜೆ 4:00 ಗಂಟೆಗೆ ನಡೆಯಲಿರುವುದು. ತಂದೆ ತಾಯಿಯ ಅಗಲುವಿಕೆ ಮಕ್ಕಳಿಗೆ ಅತೀವ ದುಃಖ ತಂದಿದೆ. ಮೃತರು ಪುತ್ರ, ಪುತ್ರಿಯನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.