ವಿದ್ಯೆಯ ಜೊತೆಗೆ ಸಂಸ್ಕಾರವೂ ಅಗತ್ಯ – ಡಾ. ಮೋಹನ್ ಜೀ ಭಾಗವತ್
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವ
ಬಂಟ್ವಾಳ : ವಿದ್ಯೆಯಿಂದ ನಾವು ಪಡೆದ ಜ್ಞಾನವನ್ನು ಯಾವತ್ತೂ ಕೂಡ ನಮ್ಮ ಸ್ವಾರ್ಥಕ್ಕೆ ಬಳಸದೆ ದೇಶದ ಅಭಿವೃದ್ಧಿ, ಸಂಸ್ಕೃತಿಯ ರಕ್ಷಣೆ, ದುರ್ಬಲರ ಏಳಿಗೆಗೆ ಉಪಯೋಗಿಸಬೇಕು ಎಂದು ಆರ್.ಎಸ್.ಎಸ್. ಸರಸಂಘಚಾಲಕ್ ಡಾ. ಮೋಹನ್ ಜೀ ಭಾಗವತ್ ಕರೆ ನೀಡಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವವನ್ನು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಉದ್ಘಾಟಿಸಿ, ವೀಕ್ಷಿಸಿದ ಬಳಿಕ ಮಾತನಾಡಿದ ಅವರು ವಿದ್ಯೆಯು ಕೇವಲ ಹೊಟ್ಟೆ ತುಂಬಿಸುವ ಸಾಧನವಲ್ಲ ಎಂಬ ಜ್ಞಾನ ಅಗತ್ಯ. ಶಿಕ್ಷಿತ ಮನುಷ್ಯ ತನ್ನ ಕುಟುಂಬವನ್ನು ಪಾಲನೆ ಮಾಡುವ ಜತೆಗೆ ವಿದ್ಯೆಯನ್ನು ಸರಿಯಾಗಿ ಉಪಯೋಗಿಸುವ ಬುದ್ಧಿ- ಸಂಸ್ಕಾರ ಅತಿ ಅಗತ್ಯವಾಗಿದೆ. ಪುಸ್ತಕದ ಓದಿನ ಜತೆಗೆ ಎಲ್ಲರನ್ನೂ ಪ್ರೀತಿಸುವ ಗುಣ ನಮ್ಮಲ್ಲಿರಬೇಕಿದ್ದು, ಇತರಿಗೆ ಜ್ಞಾನ ವೃದ್ಧಿಗೂ ನಮ್ಮ ಶಿಕ್ಷಣ ಬಳಸಬೇಕು. ಈ ಎಲ್ಲಾ ಗುಣಗಳನ್ನು ಹೊಂದಿರುವವರು ಮಾತ್ರ ಶಿಕ್ಷಿತರು ಎಂಬ ಅರ್ಹರಾಗುತ್ತಾರೆ ಎಂದರು.
ದೇಶದಲ್ಲಿ ಕಳೆದ ಸಾಲಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಆದರೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅದಕ್ಕೆ ಮುನ್ನವೇ ಅಂತಹ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದ್ದು, ಮನುಷ್ಯನನ್ನು ವಿಚಾರಪೂರ್ಣ ವ್ಯಕ್ತಿಯಾಗಿಸಲು ಇಲ್ಲಿ ಉಚಿತ ಶಿಕ್ಷಣ ಸಿಗುತ್ತಿದೆ ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಸಿಮೆಂಟ್ ಮಂಜು, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬೆಂಗಳೂರು ಎಂ.ಆರ್.ಜಿ. ಗ್ರೂಪ್ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಬಂಜಾರ, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಉದ್ಯಮಿ ಸಂತೋಷ್ ಕುಮಾರ್ ದಳಂದಿಲ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಆರ್.ಎಸ್.ಎಸ್. ನ ವಿವಿಧ ಜವಾಬ್ದಾರಿಗಳನ್ನು ಹೊತ್ತ ಪ್ರಮುಖರಾದ ಮುಕುಂದ್ ಸಿ.ಆರ್., ಡಾ. ವಾಮನ ಶೆಣೈ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸುಧೀರ್, ಭರತ್, ತಿಪ್ಪೇಸ್ವಾಮಿ, ಕೈಲಾಸ್, ಗುರುಪ್ರಸಾದ್, ನಂದೀಶ್, ಜಯಪ್ರಕಾಶ್, ನಾರಾಯಣ ಶೆಣೈ, ಪಟ್ಟಾಭಿರಾಮ ಅವರು ಭಾಗವಹಿಸಿದ್ದರು.
ಸಂಚಾಲಕ ವಸಂತ ಮಾಧವ ಸ್ವಾಗತಿಸಿದರು. ರಾಧಾಕೃಷ್ಣ ಅಡ್ಯಂತಾಯ ಹಾಗೂ ಜಿನ್ನಪ್ಪ ಏಳ್ತಿಮಾರ್ ಕಾರ್ಯಕ್ರಮ ನಿರ್ವಹಿಸಿದರು.