ನ್ಯಾಯಾಲಯದ ಕೇವಲ ಒಂದೇ ನೋಟಿಸಿಗೆ ಹೆದರಿದ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಬರಿಮಾರು
ಕೊಟ್ಟ ಭರವಸೆಯನ್ನು ಪೂರೈಸಿದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಇವರಿಗೆ ಭಕ್ತಾಧಿಗಳಿಂದ ಕೃತಜ್ಞತೆಗಳ ಸುರಿಮಳೆ
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಇದರ ಭವ್ಯ ಪ್ರವೇಶ ದ್ವಾರದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಜೆಸಿಬಿ ಮುಖಾಂತರ ಒಡೆಯಲು ಮಾಣಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಬರಿಮಾರು ರೂಪಿಸಿದ್ದ ಸಂಚು, ಚರ್ಚ್ ಆಡಳಿತ ಮಂಡಳಿಯ ಸಕಾಲಿಕ ಮುನ್ನೆಚ್ಚರಿಕೆಯ ಕ್ರಮದಿಂದ ಠುಸ್ಸಾಗಿದೆ.
ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಇದರ ಕಾಂಕ್ರೀಟ್ ರಸ್ತೆಯ ಮುಂಬಾಗದಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ ಮಳೆ ಗಾಲದ ನೀರು ಹರಿದು ಹೋಗಲು ಚರಂಡಿ ನಿರ್ಮಿಸುವ ಯೋಜನೆಗೆ ಮಾಣಿ ಗ್ರಾಮ ಪಂಚಾಯತ್ ಒಂದನೇ ವಾರ್ಡಿನ ಸದಸ್ಯ ಮುಂದಾಗಿದ್ದರು. ಆದರೆ ಈ ಕಾಮಗಾರಿಗೆ ಸಂಬಂಧವೇ ಇಲ್ಲದ ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್, ಪಾಲನಾ ಸಮಿತಿಯ ಚುನಾವಣೆಯಲ್ಲಿ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಕೇವಲ ನಾಲ್ಕು ಮತಗಳನ್ನು ಪಡೆದು ಹೀನಾಯ ಸೋಲನ್ನು ಕಂಡ ಒಂದೇ ಒಂದು ಕಾರಣಕ್ಕೆ ಸಿಟ್ಟಿನಿಂದ ರೊಚ್ಚಿಗೆದ್ದ ಈತ ಚರ್ಚ್ ಮುಂಭಾಗದ ಕಾಂಕ್ರೀಟ್ ರಸ್ತೆಗೆ ಹಾನಿಮಾಡುವ ದುರುದ್ದೇಶ ಹೊಂದಿದ್ದನು. ಚರ್ಚ್ ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿ ಕಾಂಕ್ರೀಟನ್ನು ಒಡೆದು ಚರಂಡಿಯನ್ನು ಮಾಡುವ ದುರುದ್ದೇಶದ ಬಗ್ಗೆ ಪಾಯ್ಸ್ ಕನ್ಸಟ್ರಕ್ಷನ್ ಎಂಬ ಹೆಸರಿರುವ ಜೆಸಿಬಿ ಚಾಲಕನಿಂದ ವಿಷಯವನ್ನು ತಿಳಿದ ಭಕ್ತಾಧಿಗಳು ಹಾಗೂ ಚರ್ಚ್ ಆಡಳಿತ ಮಂಡಳಿಯ ಮುಖ್ಯಸ್ಥರಾದ, ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್ ಮತ್ತು ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ ಚರ್ಚ್ ಕಾಂಕ್ರೀಟ್ ರಸ್ತೆಯನ್ನು ಮುಟ್ಟದಂತೆ ವಿಟ್ಲ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ಸೆಪ್ಟೆಂಬರ್ 22ರಂದು ನೀಡಿದ್ದರು.
ದೂರನ್ನು ದಾಖಲಿಸಿದ ವಿಟ್ಲ ಪೊಲೀಸರು ಪ್ರಕರಣ ಸಂಖ್ಯೆ 707/2024 ರಂತೆ ದೂರನ್ನು ದಾಖಲಿಸಿ ಚರ್ಚ್ ಕಾಂಕ್ರೀಟ್ ರಸ್ತೆಯನ್ನು ಮುಟ್ಟದಂತೆ ಮೆಲ್ವಿನ್ ಕಿಶೋರ್ ಮಾರ್ಟಿಸ್ ಇವನಿಗೆ ಸೂಚನೆಯನ್ನು ನೀಡಿದ್ದರು. ಇದರಿಂದ ತೃಪ್ತನಾಗದ ಮೆಲ್ವಿನ್ ಕಿಶೋರ್ ಮಾರ್ಟಿಸ್ ಕಾಂಕ್ರೀಟ್ ರಸ್ತೆಯನ್ನು ಒಡೆಯಲು ವಿವಿಧ ರೂಪಗಳಲ್ಲಿ ತನ್ನ ಇತರ 4 ಚೇಲಗಳೊಂದಿಗೆ ಸೇರಿಕೊಂಡು ಸಂಚು ರೂಪಿಸುತ್ತಾ ಇದ್ದ ಅಲ್ಲದೇ ಚರ್ಚ್ ರಸ್ತೆಯನ್ನು ಒಡೆದೇ ಒಡೆಯುತ್ತೇನೆ ಎಂದು ಶಪಥ ಕೂಡ ಮಾಡಿದ್ದ. ಈ ಬಗ್ಗೆ ಚರ್ಚ್ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಮಾನ್ಯ ಜಿಲ್ಲಾ ನ್ಯಾಯಾಲಯದಲ್ಲಿ ಅಕ್ಟೋಬರ್ 19ರಂದು ಕಾಂಕ್ರೀಟ್ ರಸ್ತೆಯನ್ನು ಮುಟ್ಟದಂತೆ ಈತನ ಮೇಲೆ ದಾವೆ ನಂಬರ್ OS. 427/2024 ರಂತೆ ಕೇಸನ್ನು ದಾಖಲಿಸಿದ್ದರು.
ಮಾನ್ಯ ನ್ಯಾಯಾಲಯದಿಂದ ಮೆಲ್ವಿನ್ ಕಿಶೋರ್ ಮಾರ್ಟಿಸ್ ಇವನಿಗೆ ಕೂಡಲೇ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿತ್ತು. ನ್ಯಾಯಾಲಯದ ಕೇವಲ ಒಂದೇ ಒಂದು ನೋಟಿಸಿಗೆ ಹೆದರಿ ನ್ಯಾಯಾಲಯಕ್ಕೆ ಹಾಜರಾಗುವ ಮುಂಚೆಯೇ ಚರ್ಚ್ ಕಾಂಕ್ರಿಟ್ ರಸ್ತೆಯನ್ನು ಮುಟ್ಟದೇ, ಗ್ರಾಮ ಪಂಚಾಯತ್ ಗೆ ಒಳಪಟ್ಟ ಡಾಮರು ಹಾಕಿದ ರಸ್ತೆಯಲ್ಲಿ ನೀರು ಹರಿದು ಹೋಗುವ ಕಾಮಗಾರಿಯನ್ನು ಒಂದನೇ ವಾರ್ಡಿನ ಸದಸ್ಯರಲ್ಲಿ ಅಂಗಲಾಚಿಕೊಂಡು ಮಾಡಿಸಿದ್ದಾನೆ.
ಮೆಲ್ವಿನ್ ಕಿಶೋರ್ ಮಾರ್ಟಿಸ್ ಚರ್ಚ್ ಕಾಂಕ್ರೀಟ್ ರಸ್ತೆಯನ್ನು ಒಡೆಯುವುದರ ಬಗ್ಗೆ ಮಾಣಿ ಗ್ರಾಮ ಪಂಚಾಯತ್ ಕಚೇರಿಗೆ ಚರ್ಚ್ ಮುಖ್ಯಸ್ಥರು ವಕೀಲರ ಮುಖಾಂತರ ಲಿಖಿತ ದೂರನ್ನು ಸಲ್ಲಿಸಿದಾಗ ಕಾಂಕ್ರೀಟ್ ರಸ್ತೆಯನ್ನು ಮುಟ್ಟದೆ ಕಾಮಗಾರಿ ಮಾಡುವುದಾಗಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಚರ್ಚ್ ಮುಖ್ಯಸ್ಥರಿಗೆ ಭರವಸೆಯನ್ನು ನೀಡಿದ್ದರು. ನೀಡಿದ ಭರವಸೆಯನ್ನು ಪೂರೈಸಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಭಕ್ತಾಧಿಗಳು ಕೃತಜ್ಞತೆಗಳ ಸುರಿಮಳೆಗಳನ್ನು ಸಲ್ಲಿಸಿದ್ದಾರೆ.
ಹೆಸರು ಗಿಟ್ಟಿಸುವ ಉದ್ದೇಶದಿಂದ ಹೊರಟ ಮೆಲ್ವಿನ್ ಕಿಶೋರ್ ಮಾರ್ಟೀಸ್, ಚರ್ಚ್ ನ ಮುಖ್ಯಸ್ಥರ ಸಕಾಲಿಕ ಪ್ರವೇಶದಿಂದ ಇಂಗು ತಿಂದ ಮಂಗನಂತೆ ಆಗಿ ತೀವ್ರ ತರದ ಮುಜುಗರಕ್ಕೊಳಗಾಗಿದ್ದಾನೆ. ಈಗ ಭಕ್ತಾದಿಗಳು “ಮಾಡಿದ್ದುಣ್ಣೋ ಮಹರಾಯ” ಎನ್ನುತ್ತಿದ್ದಾರೆ.
ಕ್ಲಪ್ತ ಸಮಯದಲ್ಲಿ ಚರ್ಚ್ ಕಾಂಕ್ರೀಟ್ ರಸ್ತೆಯನ್ನು ಮುಟ್ಟದಂತೆ ವಿಟ್ಲ ಪೊಲೀಸ್ ಠಾಣೆಗೆ ಹಾಗೂ ಮಾನ್ಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ನ್ಯಾಯ ಒದಗಿಸಿ ಕೊಟ್ಟ ಚರ್ಚ್ ಮುಖ್ಯಸ್ಥರಿಗೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಭಕ್ತಾಧಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.