ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ 7ನೇ ಹೊಸ ಸೇತುವೆ ನಿರ್ಮಿಸಲು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ
ಬಂಟ್ವಾಳ: ತಾಲೂಕು ವ್ಯಾಪ್ತಿಯಲ್ಲಿ ಸೆರಗೊಡ್ಡಿ ಹರಿಯುವ ನೇತ್ರಾವತಿ ನದಿಗೆ ಮತ್ತೊಂದು ಹೊಸ ಸೇತುವೆ ನಿರ್ಮಾಣಗೊಳ್ಳಲಿದೆ. ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ 7ನೇ ಹೊಸ ಸೇತುವೆ ನಿರ್ಮಿಸಲು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಿಂದ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮವನ್ನು ಈ ಹೊಸ ಸೇತುವೆ ಬೆಸಯಲಿದ್ದು ಎರಡು ತಾಲೂಕುಗಳಿಗೆ ಸಂಪರ್ಕ ಕೊಂಡಿಯಾಗಲಿದೆ.
ಹಲವು ವರ್ಷಗಳ ಬೇಡಿಕೆ:
ಸಜೀಪ ಮಾಗಣೆಗೊಳಪಟ್ಟು ಸಜೀಪಮೂಡ, ಸಜೀಪಮುನ್ನೂರು, ಸಜೀಪನಡು, ಸಜೀಪಪಡು ಎನ್ನುವ ನಾಲ್ಕು ಗ್ರಾಮಗಳಿದೆ. ಈ ನಾಲ್ಕು ಗ್ರಾಮಗಳು ಬಂಟ್ವಾಳ ತಾಲೂಕು ವ್ಯಾಪ್ತಿಗೆ ಒಳಪಟ್ಟಿತ್ತು. ಉಳ್ಳಾಲ ಹೊಸ ತಾಲೂಕು ನಿರ್ಮಾಣಗೊಂಡ ಬಳಿಕ ಸಜೀಪನಡು ಮತ್ತು ಸಜೀಪಪಡು ಗ್ರಾಮಗಳು ಉಳ್ಳಾಲ ತಾಲೂಕು ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಈ ನಾಲ್ಕು ಗ್ರಾಮಗಳು ಮಾತ್ರವಲ್ಲದೆ ಇದರ ಸುತ್ತಮುತ್ತಲಿನ ಚೇಳೂರು, ಬೋಳ್ಯಾರು, ಮತ್ತಿತರ ಭಾಗದ ಜನರಿಗೆ ತುಂಬೆ, ಫರಂಗಿಪೇಟೆ, ಅರ್ಕುಳ, ಬ್ರಹ್ಮರಕೂಟ್ಲು ಅತ್ಯಂತ ಸನಿಹದಲ್ಲಿದ್ದರೂ ನೇತ್ರಾವತಿ ನದಿ ಈ ಊರುಗಳನ್ನು ಭೌಗೋಳಿಕವಾಗಿ ಪ್ರತ್ಯೇಕಿಸಿದೆ. ಇದರಿಂದಾಗಿ ಈ ಊರಿನ ಜನರು ಜಿಲ್ಲಾ ಕೇಂದ್ರ ಮಂಗಳೂರು ಅಥವಾ ತುಂಬೆ, ಫರಂಗಿಪೇಟೆ, ಅಡ್ಯಾರು ಮತ್ತಿತರ ಪ್ರದೇಶಗಳಿಗೆ ಹೋಗಿ ಬರಬೇಕಾದರೆ ಮೆಲ್ಕಾರ್, ಬಿ.ಸಿ. ರೋಡಿಗೆ ಹೋಗಿ ಸುತ್ತುಬಳಿಸಿ ಬರಬೇಕಾಗಿತ್ತು. ಅಥವಾ ಮುಡಿಪು, ಕೋಣಾಜೆ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಿತ್ತು. ಇಲ್ಲೊಂದು ಸೇತುವೆ ನಿರ್ಮಾಣವಾದರೆ ಸುತ್ತುಬಳಸಿ ಹೋಗುವ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವ ಬೇಡಿಕೆಯನ್ನು ಹಲವು ವರ್ಷಗಳ ಹಿಂದೆಯೇ ಈ ಭಾಗದ ಜನರು ಜನಪ್ರತಿನಿಧಿಗಳ ಮುಂದಿಟ್ಟಿದ್ದರು. ಈ ಹಿಂದೆ ತುಂಬೆಯಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣಗೊಂಡ ಸಂದರ್ಭದಲ್ಲೂ ಡ್ಯಾಂ ಮೇಲಿಂದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಸಜೀಪ ಭಾಗದ ಜನರಿಗೆ ಅನುಕೂಲವಾಗಲಿದೆ ಎನ್ನುವ ಬೇಡಿಕೆಯನ್ನು ಮುಂದಿಡಲಾಗಿತ್ತು. ಕಾರಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ.
ವಿಧಾನಸಭಾಧ್ಯಕ್ಷರ ಪ್ರಸ್ತಾವನೆ:
ಸಜೀಪನಡುವಿನಿಂದ ತುಂಬೆಗೆ ಸಂಪರ್ಕ ಕಲ್ಪಿಸುವ ಹೊಸ ಸೇತುವೆ ನಿರ್ಮಾಣದ ಬೇಡಿಕೆಯನ್ನು ಸ್ಥಳೀಯ ಗ್ರಾಮಸ್ಥರು ವಿಧಾನಸಭೆ ಸಭಾಧ್ಯಕ್ಷ, ಮಂಗಳೂರು ಶಾಸಕ ಯು.ಟಿ.ಖಾದರ್ ಅವರಿಗೆ ನೀಡಿದ್ದರು. ಖಾದರ್ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಚಿವ ಸಂಪುಟ ಸೇತುವೆ ನಿರ್ಮಾಣಕ್ಕೆ ಅಂದಾಜು 62 ಕೋಟಿ ರೂಪಾಯಿ ಮೊತ್ತದ ಅನುಮೋದನೆ ನೀಡಿರುವುದಾಗಿ ತಿಳಿದು ಬಂದಿದೆ. ಉದ್ದೇಶಿತ ಸೇತುವೆ ನಿರ್ಮಾಣಗೊಳ್ಳಲಿರುವ ನೇತ್ರಾವತಿ ನದಿಯ ಒಂದು ಪಾರ್ಶ್ವದಲ್ಲಿರುವ ಸಜೀಪನಡು ಗ್ರಾಮ ಉಳ್ಳಾಲ ತಾಲೂಕು ವ್ಯಾಪ್ತಿಗೆ ಸೇರಿದ್ದು, ಇನ್ನೊಂದು ಪಾರ್ಶ್ವದಲ್ಲಿರುವ ತುಂಬೆ ಗ್ರಾಮ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಸೇರಿದೆ. ಆದರೆ ಈ ಎರಡೂ ಗ್ರಾಮಗಳು ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಸೇತುವೆ ನಿರ್ಮಾಣಗೊಂಡ ಬಳಿಕ ಈ ಭಾಗದ ಜನರು ಸುತ್ತುಬಳಸುವ ಸಮಯ, ಶ್ರಮ, ವಾಹನಕ್ಕೆ ಬಳಸುತ್ತಿದ್ದ ಇಂಧನದ ಉಳಿತಾಯವಾಗಲಿದೆ.
ನೇತ್ರಾವತಿಗೆ 7ನೇ ಸಂಪರ್ಕ ಸೇತುವೆ:
ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳಲಿರುವ 7ನೇ ಸೇತುವೆ ಇದಾಗಲಿದೆ. ಪಾಣೆಮಂಗಳೂರಿನಲ್ಲಿ ಬ್ರಿಟಿಷರು ನಿರ್ಮಿಸಿದ ಉಕ್ಕಿನ ಸೇತುವೆ ನೇತ್ರಾವತಿಗೆ ನಿರ್ಮಾಣಗೊಂಡ ಮೊದಲ ಸೇತುವೆ. ಮಾತ್ರವಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಮೊದಲ ಸಂಪರ್ಕ ಸೇತುವೆಯಾಗಿದೆ. ಬಳಿಕ ಮಂಗಳೂರು-ಬೆಂಗಳೂರು ರೈಲು ಸಂಚಾರಕ್ಕೊಂದು ಉಕ್ಕಿನ ಸೇತುವೆ ನಿರ್ಮಿಸಲಾಗಿದೆ. ರಾಷ್ಟೀಯ ಹೆದ್ದಾರಿ ಅಗಲೀಕರಣದ ಸಂದರ್ಭ ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ನಿರ್ಮಾಣಗೊಂಡಿತು. ಚತುಷ್ಪಥ ಹೆದ್ದಾರಿಗಾಗಿ ಅದರ ಪಕ್ಕ ಮತ್ತೊಂದು ಸೇತುವೆ ನಿರ್ಮಾಣಗೊಂಡು ಕೆಲ ದಿನಗಳ ಹಿಂದೆಯಷ್ಟೇ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಜಕ್ರಿಬೆಟ್ಟುವಿನಲ್ಲಿ ನಿರ್ಮಾಣಗೊಂಡಿರುವ ಡ್ಯಾಂ ಮೂಲಕ ವಾಹನ ಸಂಚಾರಕ್ಕೂ ಅವಕಾಶ ಇದೆ. ಅಜಿಲಮೊಗರು – ಕಡೇಶಿವಾಲಯದ ಮಧ್ಯೆ ಸೌಹಾರ್ದ ಸೇತುವೆ ನಿರ್ಮಾಣಹಂತದಲ್ಲಿದೆ.
ಸಂಭ್ರಮಾಚರಣೆ:
ತುಂಬೆ – ಸಜೀಪನಡು ಗ್ರಾಮದ ಮಧ್ಯೆ ಹೊಸ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಡಿಸೆಂಬರ್ 9ರಂದು ಸೋಮವಾರ ಸಂಜೆ ತುಂಬೆ, ಪುದು ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ನೇತೃತ್ವದಲ್ಲಿ ತುಂಬೆ ಜಂಕ್ಷನ್ ನಿಂದ ನೇತ್ರಾವತಿ ನದಿ ತೀರದ ವರೆಗೆ ಮೆರವಣಿಗೆ ನಡೆಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಸಾಲ್ಯಾನ್, ಮಾಜಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು, ಮಾಜಿ ಅಧ್ಯಕ್ಷ ರಮ್ಮಾನ್ ಮಾರಿಪಳ್ಳ, ಪ್ರಮುಖರಾದ ಲತೀಫ್ ತುಂಬೆ, ಮೋನಪ್ಪ ಮಜಿ, ಗೋಪಾಲಕೃಷ್ಣ ತುಂಬೆ, ಇಬ್ರಾಹಿಂ, ಶರೀಫ್, ಪ್ರಕಾಶ್ ಬಿ. ಶೆಟ್ಟಿ, ಜಗದೀಶ್ ಗಟ್ಟಿ, ದೇವದಾಸ್ ಪರ್ಲಕ್ಕೆ ಮತ್ತಿತರರು ಹಾಜರಿದ್ದರು.
ಜನರ ಬಹುವರ್ಷಗಳ ಬೇಡಿಕೆಯಾದ ಸಜೀಪ ನಡುವಿನಿಂದ ತುಂಬೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಶಿಪಾರಸ್ಸಿನಂತೆ ಸೇತುವೆ ಮಂಜೂರುಗೊಂಡಿದ್ದು ಸುಮಾರು 62 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ – ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು