January 16, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನ್ಯಾಯಪೀಠಕ್ಕೇ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ – ಚುನಾವಣಾಧಿಕಾರಿ ಹಾಗೂ ಸಂಘದ ಪದಾಧಿಕಾರಿಗಳಿಗೆ 5 ಲಕ್ಷ ರೂಪಾಯಿ ದಂಡದ ಶಿಕ್ಷೆ

ರಿಟ್ ವಜಾಗೊಳಿಸಿ ಸರ್ಕಾರಿ ನೌಕರರ ಸಂಘದ ಮರುಚುನಾವಣೆಗೆ ಹೈಕೋರ್ಟ್ ನಿರ್ದೇಶನ

ದಾಖಲೆಗಳ ಸಹಿತ ಎದುರುದಾರರ ಪರ ವಾದಿಸಿದ ಖ್ಯಾತ ವಕೀಲರಾದ ರವಿಶಂಕರ್ ಶಾಸ್ತ್ರಿ ಜಿ.

ಪ್ರಜಾಪ್ರಭುತ್ವದ ಸೌಂದರ್ಯ ಎನಿಸಿದ ಪವಿತ್ರ “ಮತದಾನ”ದ ಸಂವಿಧಾನಾತ್ಮಕ ಹಕ್ಕಿನಿಂದ ನ್ಯಾಯಾಂಗ ಇಲಾಖಾ ನೌಕರರನ್ನು ವಂಚಿತರನ್ನಾಗಿ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮುಖಭಂಗ ಉಂಟಾಗಿದೆ. ನ್ಯಾಯಪೀಠಕ್ಕೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ತಂದಿದ್ದ ಪದಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ ಮರುಚುನಾವಣೆಗೆ ಆದೇಶಿಸಿದ ಕರ್ನಾಟಕ ಹೈಕೋರ್ಟ್, ರಿಟ್‌ ಅರ್ಜಿಯನ್ನು ವಜಾಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರುಗಳ ಹುದ್ದೆಗೆ ನ್ಯಾಯಾಂಗ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗೆ ದಿನಾಂಕ 26.11.2024ರೊಳಗೆ ಚುನಾವಣೆ ನಡೆಸುವಂತೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ಹೊರಡಿಸಿದ ಅಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶವನ್ನು ಪಾಲಿಸುವ ಬದಲು ಮಾನ್ಯ ಕರ್ನಾಟಕ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ನಡೆಸಬೇಕೆಂಬ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾಧಿಕಾರಿಯ ದುರುದ್ದೇಶ ಪೂರಿತ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿದಾರರಿಗೆ ರೂಪಾಯಿ 5 ಲಕ್ಷ ದಂಡವನ್ನು ವಿಧಿಸಿ ಮರು ಚುನಾವಣೆ ನಡೆಸುವಂತೆ ನಿರ್ದೇಶಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.

ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ :-

ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿದ್ದರೂ ತನಗೆ ಮತ ಚಲಾಯಿಸುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇಲ್ಲವೆಂಬ ಷರಾದಿಂದ ಬಾಧಿತರಾದ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಪ್ರಕಾಶ್ ನಾಯಕ್ ಅವರು ತನಗೆ ಚುನಾವಣೆಯಲ್ಲಿ ಮತದಾನ ಮಾಡುವ ಸ್ಪರ್ಧಿಸುವ ಹಕ್ಕನ್ನು ನೀಡುವಂತೆ ಪ್ರತಿವಾದಿ ಸಂಘಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ ದಾವೆಯಲ್ಲಿ ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಆಜ್ಞಾಪಕ ನಿರ್ಬಂಧಕಾಜ್ಞೆಯ ಅನ್ವಯ ಚುನಾವಣೆಯಲ್ಲಿ ಮತ ಚಲಾಯಿಸಲು ಹಾಗೂ ಸ್ಪರ್ಧಿಸಲು ಪ್ರಕಾಶ್ ನಾಯಕ್ ಅವರಿಗೆ ಅವಕಾಶ ಪ್ರಾಪ್ತವಾಗಿತ್ತು. ಆದರೆ ನ್ಯಾಯಾಲಯದ ಆದೇಶವನ್ನು ಚುನಾವಣಾ ಅಧಿಕಾರಿ ಪಾಲಿಸದ ಕಾರಣ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲಾಗಿತ್ತು. ಸದರಿ ಅರ್ಜಿಯಲ್ಲಿ ಹೊರಡಿಸಿದ ಆದೇಶಕ್ಕೆ ಮಣಿದು ಪರಿಷ್ಕೃತ ಆದೇಶವನ್ನು ಹೊರಡಿಸಿ ಅವರಿಗೆ ಮತದಾನದ ಹಾಗೂ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು. ಆದರೆ ಚುನಾವಣಾಧಿಕಾರಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ನೇಮಕಗೊಂಡ ಚುನಾವಣಾಧಿಕಾರಿ ಮತ್ತೆ ನ್ಯಾಯಾಂಗ ಆದೇಶವನ್ನು ಉಲ್ಲಂಘಿಸಿ ದಿನಾಂಕ 16.11.2024ರಂದು ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ಉಳಿದ ಇಲಾಖೆಗಳಿಗೆ ಚುನಾವಣೆ ನಡೆಸಿದ್ದರು. ಹಾಗೂ ನ್ಯಾಯಾಂಗ ಇಲಾಖೆಯ ಚುನಾವಣೆಯನ್ನು ಕಾದಿರಿಸಲಾಗಿದೆ ಎಂಬ ಪತ್ರಿಕಾ ಪ್ರಕಟಣೆ ನೀಡಿದ್ದರು.

ಈ ಮಧ್ಯೆ ಪದಾಧಿಕಾರಿಗಳ ಚುನಾವಣೆಗೆ ಪ್ರಕಟಣೆ ಹೊರಡಿಸಲಾಯಿತು. ನ್ಯಾಯಾಂಗ ಇಲಾಖೆಯ ಚುನಾವಣೆ ನಡೆಸಿ ತನಗೆ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕೆಂದು ಕೋರಿ ಮತ್ತು ಮತ್ತೋರ್ವ ಅಭ್ಯರ್ಥಿ ಸಬಿತಾ ಸೆರಾವೊ ಅವರು ಹೂಡಿದ ದಾವೆಯಲ್ಲಿ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ದಿನಾಂಕ 26‌.11.2024ರೊಳಗೆ ಚುನಾವಣೆ ನಡೆಸುವಂತೆ ದಿನಾಂಕ 22.11.2024 ರಂದು ಆಜ್ಞಾಪಕ ನಿರ್ಬಂಧಕಾಜ್ಞೆ ಆದೇಶ ನೀಡಿತು‌‌. ಆದರೆ ಸದರಿ ಆದೇಶವನ್ನು ಪಾಲಿಸುವ ಬದಲು ಮಾನ್ಯ ಹೈಕೋರ್ಟಿಗೆ ಸಂಘದ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ರಿಟ್ ಅರ್ಜಿ ಸಲ್ಲಿಸಿ ವಾಸ್ತವ ಸಂಗತಿಗಳನ್ನು ಮರೆಮಾಚಿ ಮಾನ್ಯ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ನಡೆಸಬೇಕೆಂಬ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದರು. ಎದುರುದಾರರಿಗೆ ತುರ್ತು ನೋಟಿಸ್ ನೀಡುವಂತೆ ಆದೇಶಿಸಿದ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ದಿನಾಂಕ 12.12.2024ಕ್ಕೆ ನಿಗದಿಪಡಿಸಿತು. ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶದಿಂದ ಯಾವುದೇ ರೀತಿಯಲ್ಲಿ ಬಾಧಿತರಾಗದ ಸಂಘದ ಪದಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಯು ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ ಮಾಡುವ ಸಾಂವಿಧಾನಿಕ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಇಲಾಖೆಯ ನೌಕರರ ಚುನಾವಣೆಗೆ ತಡೆಯಾಜ್ಞೆ ಪಡೆದು ಅವರನ್ನು ಮತದಾನದ ಪವಿತ್ರ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿರುವ ಸಂಗತಿಯನ್ನು ದಾಖಲೆಗಳ ಸಹಿತ ಎದುರುದಾರರ ಪರ ವಾದಿಸಿದ ವಕೀಲರಾದ ರವಿಶಂಕರ್ ಶಾಸ್ತ್ರಿ ಜಿ. ಅವರು ಗೌರವಾನ್ವಿತ ನ್ಯಾಯಮೂರ್ತಿಗಳಾದ ಆರ್. ನಟರಾಜ್ ಅವರಿದ್ದ ನ್ಯಾಯಪೀಠದ ಅವಗಾಹನೆಗೆ ತಂದರು.

ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಆದೇಶವನ್ನು ಉಲ್ಲಂಘಿಸಿ ನ್ಯಾಯಾಂಗ ಇಲಾಖೆಯ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸುವ ಮೂಲಕ ಚುನಾವಣಾಧಿಕಾರಿಯು ಮಾನ್ಯ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ಪಡೆದಿರುವ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು ದಿನಾಂಕ 27.12.2024ರಂದು ರಾಜ್ಯ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ದಿನಾಂಕ ನಿಗದಿಯಾಗಿರುವುದನ್ನು ಪರಿಗಣಿಸಿ ದಿನಾಂಕ 27.12.2024ರೊಳಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತು.

ಮಾನ್ಯ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಇಲಾಖೆಯ ನೌಕರರನ್ನು ಮತದಾನದ ಸಾಂವಿಧಾನಿಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿದ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾಧಿಕಾರಿಗೆ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಯಿತು. ಆದೇಶದ ದಿನಾಂಕದಿಂದ ನಾಲ್ಕು ವಾರಗಳ ಅವಧಿಯೊಳಗೆ ದಂಡದ ಹಣವನ್ನು ಹೊಸಬೆಳಕು ವೃದ್ಧಾಶ್ರಮ ಸಂಸ್ಥೆಗೆ ನೀಡುವಂತೆ ಮಾನ್ಯ ಹೈಕೋರ್ಟ್ ಆದೇಶಿಸಿದೆ.

You may also like

News

ರಾಜ್ಯ ಮಟ್ಟದ ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದ ದರ್ಬೆ ಬೆಥನಿ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ  ಕೆಜಿಎಫ್  ಪ್ರೌಢ ಶಾಲೆಯಲ್ಲಿ ಜನವರಿ 8 ಮತ್ತು 9ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ
News

ಉಡುಪಿ – ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ವಿರೋಧ ಮತ್ತು ಆಕ್ರೋಶ

ಯೋಜನೆ ನಿಲ್ಲಿಸದಿದ್ದಲ್ಲಿ ರೈತರಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ ಮಂಗಳೂರು: ಪ್ರಸ್ತಾವಿತ ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆ ವಿರೋಧಿಸಿ, ಜನವರಿ

You cannot copy content of this page