ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ICDS ಪ್ರತ್ಯೇಕ ನಿರ್ದೇಶನಾಲಯ ಮಾಡಲು ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ
ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ICDS ಪ್ರತ್ಯೇಕ ನಿರ್ದೇಶನಾಲಯ ಮಾಡಿ, ಉದ್ಯೋಗವನ್ನು ಖಾಯಂ ಮಾಡಿ, ಕನಿಷ್ಠ ವೇತನ ಸವಲತ್ತುಗಳನ್ನು ಒದಗಿಸಲು ಆಗ್ರಹಿಸಿ ನಗರದ ಉರ್ವಾಸ್ಟೋರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯೆದುರು CITUಗೆ ಸಂಯೋಜಿತಗೊಂಡಿರುವ ಅಂಗನವಾಡಿ ನೌಕರರ ಸಂಘವು ಪ್ರತಿಭಟನಾ ಪ್ರದರ್ಶನವನ್ನು ನಡೆಸಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷರೂ, CITU ಜಿಲ್ಲಾ ಉಪಾಧ್ಯಕ್ಷ ಬಿ.ಎಂ. ಭಟ್ ರವರು ಮಾತನಾಡುತ್ತಾ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ICDS ಯೋಜನೆಯನ್ನು ಉಳಿಸಿ ಬೆಳೆಸಬೇಕಾದ ಕೇಂದ್ರ ರಾಜ್ಯ ಸರಕಾರಗಳು ಇದೇ ಯೋಜನೆಯನ್ನು ಕತ್ತು ಹಿಸುಕಿ ಸರ್ವನಾಶ ಮಾಡುವ ಹುನ್ನಾರದಲ್ಲಿದೆ. ಸುಪ್ರೀಂ ಕೋರ್ಟ್ ಹಾಗೂ ಗುಜರಾತ್ ಹೈಕೋರ್ಟ್ ಗಳು ಅಂಗನವಾಡಿ ಕಾರ್ಯಕರ್ತೆಯರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ತೀರ್ಪು ನೀಡಿದ್ದರೂ ಅದನ್ನು ಜಾರಿಗೊಳಿಸಲು ಇವೆರಡೂ ಸರಕಾರಗಳು ಸಿದ್ದವಾಗಿಲ್ಲದಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.
CITU ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಇವರು ಮಾತನಾಡಿ, ಮಹಿಳೆಯರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನೇತೃತ್ವದ NDA ಸರಕಾರವು 2018ರಿಂದ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಯಾವುದೇ ರೀತಿಯ ಗೌರವಧನವನ್ನು ಹೆಚ್ಚಳ ಮಾಡಿಲ್ಲ. ಮಾತ್ರವಲ್ಲದೆ ರಾಜ್ಯದ ಕಾಂಗ್ರೆಸ್ ಸರಕಾರವೂ ಕೂಡ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ 15,000 ರೂಪಾಯಿಗಳ ಗೌರವ ಧನವನ್ನೂ ಹೆಚ್ಚಿಸಿಲ್ಲ. ಈ ಮೂಲಕ ಕೇಂದ್ರ ರಾಜ್ಯ ಸರಕಾರಗಳು ಅಂಗನವಾಡಿ ತಾಯಂದಿರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷರಾದ ರವಿಕಲಾರವರು ಅಂಗನವಾಡಿ ಕಾರ್ಯಕರ್ತೆಯರ ಬದುಕಿನ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಸರಕಾರಗಳ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬದುಕಿನ ಬಗ್ಗೆ ಕಿಂಚಿತ್ತೂ ಗಮನ ಹರಿಸದ ಸರಕಾರಗಳ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ರವರು ಭೇಟಿ ನೀಡಿ ಮನವಿಯನ್ನು ಸ್ವೀಕರಿಸಿದರು. ಹೋರಾಟದ ನೇತ್ರತ್ವವನ್ನು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ನಾಯಕರಾದ ಲಕ್ಷ್ಮಿ, ಗಾಯತ್ರಿದೇವಿ, ಅರುಣಾ, ಸಾವಿತ್ರಿ, ನಳಿನಿ, ಕುಸುಮ, ಅಂಬಾವತಿ ಮುಂತಾದವರು ವಹಿಸಿದ್ದರು.