ಸಹಕಾರಿ – ಸಮಾಜ ಸೇವಾ ಕ್ಷೇತ್ರದ ಸಾಧಕ ಕೆ. ಸಂಜೀವ ಪೂಜಾರಿ ಅವರಿಗೆ ಹುಟ್ಟೂರ ಗೌರವ
![](https://karavalisuddi.com/wp-content/uploads/2024/12/rasamanjari-1.webp)
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಹಕಾರಿ – ಸಮಾಜ ಸೇವಾ ಕ್ಷೇತ್ರದ ಸಾಧಕ ಕೆ. ಸಂಜೀವ ಪೂಜಾರಿ ಅವರಿಗೆ ಕೆ. ಸಂಜೀವ ಪೂಜಾರಿ ಅಭಿನಂದನಾ ಸಮಿತಿ, ಬಿ.ಸಿ. ರೋಡಿನ ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ, ಮೆಲ್ಕಾರಿನ ಶ್ರೀಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಶಿವಗಿರಿ ಮಹಿಳಾ ಸಹಕಾರಿ ಸಂಘ ಹಾಗೂ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಡಿಸೆಂಬರ್ 15ರಂದು ರವಿವಾರ ಸಜೀಪಮೂಡ ಸುಭಾಷ್‌ನಗರ ಶ್ರೀಗುರು ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಅಭಿಮಾನದ ಸಾಧಕನಿಗೆ ಹುಟ್ಟೂರ ಗೌರವ ನೀಡಿ ಸಮ್ಮಾನಿಸಲಾಯಿತು.
ಮಾಜಿ ಸಚಿವ ಬಿ. ರಮಾನಾಥ ರೈ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರುಗಳ ಆದರ್ಶದೊಂದಿಗೆ ಸಂಜೀವಣ್ಣ ಸಹಕಾರಿ ಚಳುವಳಿಯಲ್ಲಿ ಸಾಧನೆ ತೋರಿದ್ದು, ಸಾಮಾಜಿಕ ಬದುಕಿನ ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿದ್ದು, ಜನಪ್ರತಿನಿಽಯಾಗಿ ಸಮುದಾಯ ಏಳಿಗೆಯ ಕುರಿತು ಚಿಂತನೆ ನಡೆಸಿದ್ದರು. ಸರಕಾರವು ನಾರಾಯಣ ಗುರು ಜಯಂತಿ ಆಚರಿಸುವ ಘೋಷಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸಜೀಪಮೂಡದ ಗುರುಮಂದಿರದಲ್ಲಿ ಮಾಡಿದ್ದು, ಇದರಲ್ಲಿ ಸಂಜೀವಣ್ಣನ ಪ್ರಯತ್ನವಿರುವುದು ಸ್ಮರಣೀಯ ಎಂದರು.
ಅಭಿನಂದನಾ ಸಮಿತಿಯ ಪ್ರಧಾನ ಸಂಚಾಲಕ ಕೆ. ಸಂಜೀವ ಪೂಜಾರಿ ಸುಭಾಷ್‌ನಗರ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ಅಭಿನಂದನಾ ಭಾಷಣ ಮಾಡಿ, ಸಂಜೀವಣ್ಣನ ಬದ್ಧತೆಯ ಫಲವಾಗಿ ಪ್ರಶಸ್ತಿ ಲಭಿಸಿದ್ದು, ಅದಕ್ಕಿಂತಲೂ ಜನಪ್ರೀತಿ ಪಡೆದ ಸಮ್ಮಾನ ವಿಶೇಷವಾಗಿದೆ. ಶೂನ್ಯದಿಂದ ಆರಂಭಗೊಂಡ ಸಂಜೀವಣ್ಣನ ಸಾಧನೆ ಸಮಾಜಕ್ಕೆ ಆದರ್ಶ ಎನಿಸಿಕೊಳ್ಳುತ್ತದೆ. ಅವರು ಕಾಲೇಜಿಗೆ ಹೋಗದಿದ್ದರೂ ಬಯಲು ವಿಶ್ವವಿದ್ಯಾನಿಲಯದ ಅನುಭವದ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ ಎಂದರು.
ಶ್ರೀಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಬಂಟ್ವಾಳ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿಸೋಜ, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಶುಭಹಾರೈಸಿದರು. ಶಿವಗಿರಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಸಜೀಪಮೂಡ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ರಮೇಶ್ ಅನ್ನಪ್ಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಉಪಾಧ್ಯಕ್ಷ ರಾಜೇಶ್ ಸುವರ್ಣ, ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಹುಟ್ಟೂರ ಸಮ್ಮಾನಕ್ಕೆ ಉತ್ತರಿಸಿದ ಕೆ. ಸಂಜೀವ ಪೂಜಾರಿ ಅವರು, ನನಗೆ ಸಿಕ್ಕ ಪ್ರತಿ ಜವಾಬ್ದಾರಿಗಳನ್ನೂ ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಯಾವತ್ತೂ ಕೂಡ ಪ್ರಶಸ್ತಿಯ ಹಿಂದೆ ಹೋಗಿಲ್ಲ. ನನ್ನ ಆತ್ಮೀಯರು ಸೇರಿಕೊಂಡು ಶ್ರಮಿಸಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಪ್ರಶಸ್ತಿ ಸಿಕ್ಕಿದ ಬಳಿಕ ಅದರ ಮೌಲ್ಯದ ಅರಿವಾಗಿದ್ದು, ಜನರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ದುಡಿದ ಸಂಸ್ಥೆಗಳಿಂದ ಸಿಕ್ಕ ಈ ಗೌರವ ಪ್ರಶಸ್ತಿಗಿಂತಲೂ ಸಂತೋಷ ತಂದಿದೆ ಎಂದರು.
ಸಮಿತಿಯ ಸಂಚಾಲಕ ಗಿರೀಶ್‌ಕುಮಾರ್ ಪೆರ್ವ ಸ್ವಾಗತಿಸಿ, ವಂದಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಸಂಚಾಲಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಮಹೇಶ್ ಪೂಜಾರಿ ಪಟ್ಟುಗುಡ್ಡೆ, ಯಶವಂತ ಪೂಜಾರಿ ದೇರಾಜೆಗುತ್ತು, ತಾರಾನಾಥ ಪೂಜಾರಿ ಮರ್ತಾಜೆ, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಂಗಳೂರು ಲೈವ್ ಮ್ಯೂಸಿಕ್ ಶೋರ್ ದಾ ಬ್ಯಾಂಡ್ ಅವರಿಂದ ಸಂಗೀತ ರಸಮಂಜರಿ ನಡೆಯಿತು.