ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಶಾಲಾ ವಾರ್ಷಿಕೋತ್ಸವ
ಬಂಟ್ವಾಳ : ಊರಿನ ಶಾಲೆಯ ಅಭಿವೃದ್ಧಿಯ ಜವಾಬ್ದಾರಿ ಆ ಊರಿನ ಸಮುದಾಯದವರದ್ದೇ ಆಗಿರುತ್ತದೆ, ಶಾಲೆಯ ಏಳಿಗೆಗೆ ಶ್ರಮಿಸುವುದು ಶಾಲಾ ಪೋಷಕರ ಮತ್ತು ಆ ಊರಿನ ಜನರ ಕರ್ತವ್ಯವಾಗಿದೆ. ಒಂದು ವಿದ್ಯಾ ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇದ್ದರೂ ಎಲ್ಲರನ್ನೂ ಸಮಾನವಾಗಿ ಕಾಣಬೇಕಾಗಿದೆ.
ಇಂದಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ಸರಕಾರಿ ಶಾಲೆಗಳಲ್ಲಿ ದೊರಕುವುದರಿಂದ ಅಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ತೊಡಗಿಸಿಕೊಳ್ಳುವುದರಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಏಳಿಗೆಯನ್ನು ಕಂಡಿದೆ. 2002-03 ನೇ ಸಾಲಿನಿಂದ ಕರ್ನಾಟಕದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹ ಯೋಜನೆಯನ್ನು ಅಂದಿನ ಮುಖ್ಯಮಂತ್ರಿಯಾದ ಎಸ್.ಎಂ. ಕೃಷ್ಣರವರು ಯೋಜಿಸಿದ್ದು ಇಂದು ಅದು ಬಹಳಷ್ಟು ಪ್ರಯೋಜನಕಾರಿಯಾಗಿ ಬೆಳೆದಿದೆ ಎಂದು ಮಾಜಿ ಉಸ್ತುವಾರಿ ಸಚಿವರಾದ ರಮಾನಾಥ ರೈ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಧಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಎಸ್. ರಾವ್ ವಹಿಸಿದ್ದು ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದರೆ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ, ಪಂಚಾಯತ್ ಮಟ್ಟದಲ್ಲಿ ಸಿಗುವ ಅನುದಾನವನ್ನು ಶಾಲೆಗೆ ನೀಡುವುದಾಗಿ ತಿಳಿಸಿದರು. ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕನ್ನೋಟ್ಟು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ನಿವೃತ್ತ ಮುಖ್ಯಶಿಕ್ಷಕ ಶ್ರೀಯುತ ಆನಂದ ನಾಯ್ಕ ಏನ್ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಾಲೆಯಲ್ಲಿ 18 ವರ್ಷಗಳಿಂದ ಅಕ್ಷರ ದಾಸೋಹ ಅಡುಗೆ ಕಾರ್ಯನಿರ್ವಹಿಸುತ್ತಿರುವ ಸರೋಜಿನಿ ಅವರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲಾ ಹಿರಿಯ ವಿದ್ಯಾರ್ಥಿಗಳಾದ ದೀಪ್ತಿ, ಆಯಿಶತುಲ್ ಸಾಹಿಪ, ಕೆ. ಅಸ್ಪಿಯ, ವಿನುತಾ ಇವರನ್ನು ಅಭಿನಂದಿಸಲಾಯಿತು.
ಶಾಲಾ ಮಕ್ಕಳಿಗೆ ಕಲಿಕೆ, ಆಟೋಟ, ಸ್ವಚ್ಛತೆ, ಪೂರ್ಣ ಹಾಜರಾತಿ ಬಗ್ಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ರಾಜ್ಯ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ದಲ್ಲಿ ಭಾಗವಹಿಸಿದ ಕಾರ್ತಿಕ್ ಕುಮಾರ್ ರವರನ್ನು ಅಭಿನಂದಿಸಾಲಾಯಿತು. ಶಾಲೆಗೆ ಪ್ರೋತ್ಸಾಹ ನೀಡಿ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಮಹನೀಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಹರಿಶ್ಚಂದ್ರ ಕಾಡಬೆಟ್ಟು, ಜಯ ದೇವಾಡಿಗ, ದೇವಿ ಪ್ರಸಾದ್ ಶೆಟ್ಟಿ, ಗೀತಾ, ಕೆದಿಲ ಕ್ಲಸ್ಟರ್ ಸಿ.ಆರ್.ಪಿ. ಸುಧಾಕರ್ ಭಟ್, ಕೆಮ್ಮಾನುಪಲ್ಕೆ ನಿವೃತ್ತ ಶಾಲಾ ಮುಖ್ಯ ಶಿಕ್ಷಕರುಗಳಾದ ಆನಂದ ನಾಯ್ಕ್, ಶಿವಪ್ಪ ಪೂಜಾರಿ, ಸುಂದರ್, ಹೇಮಾವತಿ, ಕಡೇಶಿವಾಲಯ ಶಾಲಾ ಮುಖ್ಯ ಶಿಕ್ಷಕ ಬಾಬು ಪೂಜಾರಿ, ನಿವೃತ್ತ ಸೈನಿಕ ಕೆ.ಕೆ. ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಕ್ ಯಾನೆ ಸಲೀಂ, ಉಪಾಧ್ಯಕ್ಷ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಉದಯಕುಮಾರ್ ಸ್ವಾಗತಿಸಿ, ಸಹ ಶಿಕ್ಷಕಿ ವಿದ್ಯಾ ಸರಸ್ವತಿ 2024-25ನೇ ಸಾಲಿನ ಶಾಲಾ ವರದಿ ವಾಚಿಸಿದರು. ಶಿಕ್ಷಕಿ ಸೀಮಾ ಎಚ್. ಸನ್ಮಾನಿತರ ಸನ್ಮಾನ ಪತ್ರ ವಾಚಿಸಿ, ಶಿಕ್ಷಕಿ ವಿದ್ಯಾ ಸರಸ್ವತಿ ಬಹುಮಾನಿತರ ಪಟ್ಟಿ ವಾಚಿಸಿ ಜಿ.ಪಿ.ಟಿ. ಶಿಕ್ಷಕ ಸಚಿನ್ ಎಮ್.ಎಸ್. ವಂದಿಸಿದರು. ಸಹ ಶಿಕ್ಷಕಿ ಸಂಧ್ಯಾ ಬಿ. ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಮಕ್ಕಳು ಪ್ರಸ್ತುತ ಪಡಿಸಿದ ಹುಚ್ಚು ದೊರೆ, ಜಂಭದ ಅಜ್ಜಿ, ಯಕ್ಷಗಾನ ಕುಣಿತ ಸಂವಿಧಾನ ಪೀಠಿಕೆಯ ಡ್ಯಾನ್ಸ್ ಪ್ರೇಕ್ಷಕರ ಗಮನ ಸೆಳೆಯಿತು. ಶಾಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.