ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಉಳಿದಿಲ್ಲ – ಸುನಿಲ್ ಕುಮಾರ್ ಬಜಾಲ್
ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನವಾದುದ್ದು. ಅಂತಹ ಕಾರ್ಮಿಕ ವರ್ಗದ ಉತ್ತಮ ಬದುಕಿಗಾಗಿ ಅವಿಶ್ರಾಂತವಾಗಿ ಶ್ರಮಿಸಬೇಕಾದ ಆಳುವ ವರ್ಗಗಳು ನಿತ್ಯ ನಿರಂತರವಾಗಿ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡಲು ಹಾತೊರೆಯುತ್ತಿದೆ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಇವತ್ತಿನವರೆಗೆ ಉಳಿದಿಲ್ಲ, ಜೊತೆಗೆ ಮಣ್ಣು ಮುಕ್ಕಿದೆ ಎಂದು CITU ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಇವರು ಅಭಿಪ್ರಾಯಪಟ್ಟರು. ಅವರು ಡಿಸೆಂಬರ್ 18ರಂದು ನಗರದಲ್ಲಿ CITU ನೇತ್ರತ್ವದಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು. ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಾರ್ಮಿಕ ವರ್ಗದ ಪ್ರಶ್ನೆಗಳು ಪ್ರಧಾನ ಚರ್ಚೆಗೆ ಒಳಪಡಿಸುವ ಉದ್ದೇಶದಿಂದ CITU ಡಿಸೆಂಬರ್ 17,18,19ರಂದು ಮೂರು ದಿನಗಳ ಕಾಲ ರಾಜ್ಯಾದ್ಯಂತ ಹೋರಾಟ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ CITU ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೋಟ್ಟು ಇವರು, ದೇಶದ ಕಾರ್ಮಿಕ ವರ್ಗ ದೀರೋದ್ದತ್ತ ಹೋರಾಟದ ಮೂಲಕ ಗಳಿಸಿದ ಕಾನೂನುಗಳನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ನಾಶ ಮಾಡಿ ಸಂಹಿತೆಗಳನ್ನಾಗಿ ಮಾಡಲು ಹೊರಟಿರುವುದು ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸುವ ಸೂಚಕವಾಗಿದೆ. ಸಂಸತ್ತಿನೊಳಗಡೆ ರಚನೆಗೊಂಡಿರುವ ಲೇಬರ್ ಸ್ಟಾಂಡಿಂಗ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಮಿಕ ವಿರೋಧಿಯಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಆಯ್ಕೆಯಾಗಿರುವುದರಿಂದ ಕಾರ್ಮಿಕ ವರ್ಗಕ್ಕೆ ನ್ಯಾಯ ಸಿಗುವುದೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು ಇವರು, ಕಾರ್ಮಿಕ ವರ್ಗದ ಪ್ರಶ್ನೆಗಳನ್ನು ಮುಂಚೂಣಿಗೆ ತರುತ್ತಾ, ಅಸಂಘಟಿತ ಕ್ಷೇತ್ರದ ಅಸಂಖ್ಯಾತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಈ ಕೂಡಲೇ ಜಾರಿಗೊಳಿಸಬೇಕು. ಗುತ್ತಿಗೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಸರಕಾರ ಗಮನ ಹರಿಸಬೇಕು, ಮಹಿಳಾ ಕಾರ್ಮಿಕರ ಬವಣೆಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ CITU ಜಿಲ್ಲಾ ನಾಯಕರಾದ ವಸಂತ ಆಚಾರಿ, ಬಿ.ಎಂ. ಭಟ್, ಜಯಂತಿ ಶೆಟ್ಟಿಯವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಯ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಯುವಜನ ಮುಖಂಡರಾದ ಜಗದೀಶ್ ಬಜಾಲ್ ಭಾಗವಹಿಸಿದ್ದರು. ಹೋರಾಟದ ನೇತ್ರತ್ವವನ್ನು CITU ಜಿಲ್ಲಾ ನಾಯಕರಾದ ರಾಧಾ ಮೂಡಬಿದ್ರೆ, ಭವಾನಿ ವಾಮಂಜೂರು, ರೋಹಿದಾಸ್, ಸುಂದರ ಕುಂಪಲ, ನೋಣಯ್ಯ ಗೌಡ, ಯಶೋಧ ಮಳಲಿ, ಲಕ್ಷ್ಮಿ, ಗಿರಿಜಾ ಮೂಡಬಿದ್ರೆ, ಲೋಲಾಕ್ಷಿ, ನಾಗೇಶ್ ಕೋಟ್ಯಾನ್, ಭಾರತಿ ಬೋಳಾರ, ಜಯಲಕ್ಷ್ಮಿ, ದಿನೇಶ್ ಶೆಟ್ಟಿ, ಮುಝಾಫರ್, ಸಂತೋಷ್ ಆರ್.ಎಸ್., ವಿಜಯ, ಚಂದ್ರಹಾಸ, ರಫೀಕ್ ಹರೇಕಳ, ಕ್ರಷ್ಣಪ್ಪ ಮೂಡಬಿದ್ರೆ, ಸೀತಾರಾಮ ಶೆಟ್ಟಿ, ಜಯಂತ ನಾಯಕ್, ವಿಲಾಸಿನಿ, ಗಿರಿಜಾ, ಪುಷ್ಪಾ ಮುಂತಾದವರು ವಹಿಸಿದ್ದರು.
ಬಳಿಕ CITUನ ಉನ್ನತ ಮಟ್ಟದ ನಿಯೋಗವೊಂದು ಮುಖ್ಯಮಂತ್ರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಅರ್ಪಿಸಿತು.