ತುಂಬೆ ವಿದ್ಯಾ ಸಂಸ್ಥೆಗಳ 36ನೇ ವಾರ್ಷಿಕೋತ್ಸವ
ಬಂಟ್ವಾಳ : ತುಂಬೆಯಂತಹ ಗ್ರಾಮೀಣ ಪ್ರದೇಶದಲ್ಲಿ ಡಾ| ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಇವರ ಕುಟುಂಬ ವರ್ಗದವರು ಕೂಡಿ ಸ್ಥಾಪಿಸಿದ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶಿಸ್ತು, ಕಲಿಕೆ, ಸಾಧನೆಗಳು ಅಭಿನಂದನಾರ್ಹ ಎಂದು ಕರ್ನಾಟಕ ರಾಜ್ಯದ ಸ್ಟೇಟ್ ಎಲೈಡ್ ಆಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ಚೆಯೆರ್‌ಮ್ಯಾನ್ ಡಾ| ಯು. ಟಿ. ಇಫ್ತಿಕಾರ್ ಫರೀದ್ ಹೇಳಿದರು.
ತುಂಬೆ ಪದವಿ ಪೂರ್ವ ಕಾಲೇಜಿನ 36ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಓರ್ವ ಶಿಸ್ತುಬದ್ಧ ವ್ಯಕ್ತಿ ತನ್ನ ಕೌಟುಂಬಿಕ ಶಿಸ್ತಿನಂತೆ, ಊರ ಅನೇಕ ಬಡ ಹಾಗೂ ಅರ್ಹ ವಿದ್ಯಾಕಾಂಕ್ಷಿಗಳಿಗೆ ವಿದ್ಯಾದಾನ, ಶಿಸ್ತು, ಉದ್ಯೋಗವನ್ನು ದೊರಕಿಸಿಕೊಟ್ಟ ಔದಾರ್ಯ ಮೆಚ್ಚಲೇಬೇಕಾದ್ದು. ತುಂಬೆಯ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಪಾಠೇತರ ಚಟುವಟಿಕೆಗಳು ಹಾಗೂ ಆಟೋಟಗಳ ಸಾಧನೆ, ಸಂಸ್ಥೆಗಳ ಶಿಕ್ಷಕರು, ಆಡಳಿತ ಮಂಡಳಿ ಮತ್ತು ಪೋಷಕರ ಸಂಪೂರ್ಣ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ತುಂಬೆ ಪದವಿ ಪೂರ್ವ ಕಾಲೇಜಿನ ಅತೀ ಹೆಚ್ಚು ಅಂಕಗಳಿಸಿದ ಐವರು ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಪ್ಯಾರಾ ಮೆಡಿಕಲ್ ಸೀಟುಗಳನ್ನು ದೊರಕಿಸಿಕೊಡುವಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ| ಹರ್ಷಿತಾ ಕೆ. ಪೂಂಜಾ ಮಾತನಾಡಿ, ತಾನು ಹಳೇ ವಿದ್ಯಾರ್ಥಿನಿಯಾಗಿರುವ ತುಂಬೆ ವಿದ್ಯಾ ಸಂಸ್ಥೆಯು ಹಿಂದಿನಿಂದಲೇ ಶಿಸ್ತು, ಕಲಿಕೆ, ಸಾಧನೆಗಳಲ್ಲಿ ವಿದ್ಯಾರ್ಥಿಗಳನ್ನು ತಿದ್ದಿ ನೀಡುತ್ತಿದ್ದ ಕ್ರಮಗಳನ್ನು ಕೊಂಡಾಡಿದರಲ್ಲದೆ, ತನ್ನ 12 ವರ್ಷಗಳ ಸುದೀರ್ಘ ಕಲಿಕೆ ಇಲ್ಲಿ ಆಗಿದ್ದು, ತನಗೆ ವಿದ್ಯಾಬುದ್ಧಿಯ ಜೊತೆಗೆ ಇವತ್ತು ಸಮಾಜದಲ್ಲಿ ಒಂದು ಉತ್ತಮ ಸ್ಥಾನಮಾನವನ್ನು ಪಡೆಯಲು ಸಹಾಯಕವಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಇದರ ಟ್ರಸ್ಟಿ ಬಿ.ಎಂ. ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ವಳವೂರು, ನಿಕಟ ಪೂರ್ವ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ದ್ವಿತೀಯ ಪಿಯುಸಿ ಹಾಗೂ 10 ನೇ ತರಗತಿ ವಿದ್ಯಾರ್ಥಿಗಳು ಮತ್ತು ರಾಷ್ಟ್ರ – ರಾಜ್ಯ ಮಟ್ಟದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತುಂಬೆ ವಿದ್ಯಾ ಸಂಸ್ಥೆಗಳ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಪ್ರಸ್ತುತಗೊಂಡವು
ಮುಖ್ಯ ಶಿಕ್ಷಕಿ ವಿದ್ಯಾ ಕೆ., ಪಿ.ಟಿ.ಎ. ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಸದಸ್ಯರಾದ ಮ್ಯಾಕ್ಸಿಮ್ ಕುವೆಲ್ಲೋ, ಮೊಹಮ್ಮದ್ ಶಾಫಿ, ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್, ವಿದ್ಯಾರ್ಥಿ ನಾಯಕ ಸಲ್ಮಾನ್ ಫಾರಿಸ್, ನಾಯಕಿ ಅಸ್ನಾ ಮೆಹರಾಜ್, ಪ್ರಮುಖರಾದ ಶಿಫಾರತ್, ಝೈನಾಬ ಅಫ್ರ, ಮೊಹಮ್ಮದ್ ನುಮಾನ್, ಹಫಾ ಫಾತಿಮಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಯಿರಾಮ್ ನಾಯಕ್ ಕೆ., ಜ್ಯೋತ್ಸ್ನಾ, ನಯನ, ವೀಣಾ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಮೊಹಮ್ಮದ್ ಯಾಸಿನ್ ಕಿರಾಅತ್ ಪಠಿಸಿದರು. ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ ಸ್ವಾಗತಿಸಿ, ಪ್ರಾಂಶುಪಾಲ ವಿ. ಎಸ್. ಭಟ್ ವರದಿ ವಾಚಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಎಸ್. ಶೆಟ್ಟಿ ವಂದಿಸಿ, ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ.ಬಿ. ಕಾರ್ಯಕ್ರಮ ನಿರೂಪಿಸಿದರು.